ಬೆಂಗಳೂರಿನಲ್ಲಿ ಹುಟ್ಟಿದ ಸುಪ್ರಸಿದ್ಧ ಪಿಟೀಲು ವಾದಕರಾದ ವೀರಭದ್ರಯ್ಯನವರು ಸಂಗೀತದ ವಾತಾವರಣದಲ್ಲಿಯೇ ಬೆಳೆದರು. ತಂದೆ ಹಾರ್ಮೋನಿಯಂ ವಿದ್ವಾನ್ ಎಂ ಅರುಣಾಚಲಪ್ಪ, ತಾಯಿ ಅನ್ನಪೂರ್ಣಮ್ಮ. 4 ಡಿಸೆಂಬರ್ 1923ರಲ್ಲಿ ಜನಿಸಿದ ಇವರು ಎಳವೆಯಲ್ಲಿ ತಂದೆಯಿಂದಲೇ ಪಿಟೀಲು ಶಿಕ್ಷಣವನ್ನು ಪಡೆದರು. ಪ್ರೌಢ ಶಿಕ್ಷಣವನ್ನು ನೀಡಿದವರು ಎಲ್.ಎಸ್ ನಾರಾಯಣಸ್ವಾಮಿ ಭಾಗವತರು. “ಗಾನ ಸುಧಾಕರ ಖ್ಯಾತಿಯ” ಎ. ಸುಬ್ಬರಾಯರ ಕಚೇರಿಗಳಿಗೆ 40 ವರ್ಷಗಳ ಕಾಲ ನಿರಂತರವಾಗಿ ಪಕ್ಕ ವಾದ್ಯ ನುಡಿಸಿದ ದಾಖಲೆ ಇವರದು. ಏಕವ್ಯಕ್ತಿ ಪಿಟೀಲು ವಾದನ ಕಚೇರಿ ಮಾತ್ರವಲ್ಲದೆ, ಪ್ರತಿಷ್ಠಿತ ವೇದಿಕೆಗಳಲ್ಲಿ ಘನವೆತ್ತ ವಿದ್ವಾಂಸರಿಗೆ ಹಿನ್ನೆಲೆ ನೀಡಿದ ಖ್ಯಾತರು.
“ಅರುಣಾ ಮ್ಯೂಸಿಕಲ್” ಸ್ಥಾಪಿಸುವ ಮೂಲಕ ವೀಣೆ ಮತ್ತು ತಂಬೂರಿ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು.
“ಕರ್ನಾಟಕ ಗಾನ ಕಲಾ ಪರಿಷತ್ತು”ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮರ್ಥವಾಗಿ ನಡೆಸಿಕೊಂಡು ಬಂದವರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ವಿಜಯ ಸಂಗೀತ ಮಹಾ ವಿದ್ಯಾಲಯದ ಸ್ಥಾಪಕ ಸದಸ್ಯರಾಗಿ, ” ವಾಣಿ ಸಂಗೀತ ವಿದ್ಯಾಲಯ” ಮತ್ತು “ಕೃಷ್ಣ ಸಂಗೀತ ಸಭೆ”ಯ ಅಧ್ಯಕ್ಷರಾಗಿ ಸಂಗೀತ ಸರಸ್ವತಿಯ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದವರು.
ಇವರ ಕಲಾ ಸೇವೆಗೆ ಗಾನಕಲಾ ಪರಿಷತ್ತಿನಿಂದ “ಗಾನಕಲಾ ಭೂಷಣ”, ಸೋಸಲೆ ವ್ಯಾಸರಾಜ ಮಠದಿಂದ “ನಾದ ಗಂಭೀರ”, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾಶ್ರೀ” ಅಲ್ಲದೆ ಹಲವಾರು ಸನ್ಮಾನ ಪುರಸ್ಕಾರಗಳು ಸಂದಿವೆ.
– ಅಕ್ಷರೀ
