ಶಿಕ್ಷಕರಾದ ಉಡುಪಿಯ ಶ್ರೀ ಶ್ರೀನಿವಾಸ ಹೆಬ್ಬಾರ್ ಇವರಿಗೆ 5 ಡಿಸೆಂಬರ್ 1924ರಲ್ಲಿ ಜನಿಸಿದ ಸುಪುತ್ರ ಕೆ.ಎಸ್. ರಾಜಗೋಪಾಲ್. ಮೆಟ್ರಿಕ್ ಓದುವ ಸಮಯದಲ್ಲಿ ಲಲಿತ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರಾಜಗೋಪಾಲರಿಗೆ ನೃತ್ಯದ ಬಗ್ಗೆ ವಿಶೇಷವಾದ ಆಸಕ್ತಿ ಬೆಳೆದದ್ದು ಮಾತ್ರವಲ್ಲ, ಖ್ಯಾತ ನಾಟ್ಯಾಚಾರ್ಯರಾದ ನಾಗಭೂಷಣರ ಶಿಷ್ಯರಾಗಬೇಕೆಂಬ ಆಸೆಯೂ ಇತ್ತು. ಆದರೆ ಅವರ ಪರಿಚಯವಿರಲಿಲ್ಲ. ನಂತರದಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ನೃತ್ಯಗುರು ಶ್ರೀ ಎಂ.ಆರ್. ನಾಗಭೂಷಣ ಇವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಭರತನಾಟ್ಯ ಶಿಕ್ಷಣವನ್ನು ಪಡೆದರು. ಮುಂದೆ ‘ನಾಟ್ಯ ಸರಸ್ವತಿ’ ಎಂದೇ ಪ್ರಸಿದ್ಧರಾದ ಜಟ್ಟಿ ತಾಯಮ್ಮ ಮತ್ತು ನಾಟ್ಯ ಪ್ರವೀಣೆ ಸುಂದರಮ್ಮನವರ ಬಳಿ ಉನ್ನತ ಶಿಕ್ಷಣವನ್ನು ಪಡೆದು ‘ನಾಟ್ಯಾಚಾರ್ಯ’ ಎಂದು ಪ್ರಸಿದ್ಧರಾದರು. ಆ ಕಾಲದಲ್ಲಿ ಪ್ರಸಿದ್ಧ ನಾಟಕ ಕಂಪನಿಯ ಮಾಲೀಕರಾಗಿದ್ದ ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಜಟ್ಟಪ್ಪ ಹೀಗೆ ಅವರ ಕಂಪನಿ ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಿದ್ದರು.
1938ರಲ್ಲಿ ರಾಜಗೋಪಾಲ್ ಮೈಸೂರಿಗೆ ಬಂದು ನೃತ್ಯ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಉಡುಪಿಯ ಶ್ರೀ ಬಿ.ಎಸ್. ವ್ಯಾಸವಿಠಲ್ ಇವರ ಪುತ್ರಿ ಜಯಂತಿ ವ್ಯಾಸವಿಠಲ್ ಇವರೂ ಸಹ ಅದೇ ಗುರುಗಳಲ್ಲಿ ನೃತ್ಯ ಅಭ್ಯಾಸಕ್ಕಾಗಿ ಸೇರ್ಪಡೆಗೊಂಡರು. ಕಥಕ್ ನೃತ್ಯದಲ್ಲಿ ಪರಿಣತಿ ಹೊಂದಿದ ಜಯಂತಿಯವರು ಪಿಟೀಲು ಮತ್ತು ವೀಣಾವಾದನಗಳಲ್ಲಿಯೂ ನಿಷ್ಣಾತರಾಗಿದ್ದು, ಸಂಗೀತ ಕಚೇರಿಗಳನ್ನೂ ಕೊಡುತ್ತಿದ್ದರು. ಇವರಿಬ್ಬರಿಗೆ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿ, ಹಿರಿಯರ ಸಮ್ಮತಿಯೊಂದಿಗೆ 1950ರಲ್ಲಿ ಪತಿ-ಪತ್ನಿಯರಾದರು. ನಾಟ್ಯ ಕಲೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕೆಂಬ ವಾಂಛೆಯಿಂದ ನೃತ್ಯ ಕಲಾ ಸೇವೆಯನ್ನು ಅವಿರತವಾಗಿ ಮಾಡಿಕೊಂಡು ಬಂದರು. ಇಬ್ಬರು ಜೊತೆಯಾಗಿ ಮೈಸೂರಿನ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಗುರುತಿಸಿಕೊಂಡರು. 1948ರಲ್ಲಿ ಮೈಸೂರಿನಲ್ಲಿ ‘ಶ್ರೀ ನೃತ್ಯ ಕಲಾಮಂದಿರ’ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿ ನಡೆಸಿಕೊಂಡು ಬಂದರು. ಶಿವ-ಪಾರ್ವತಿ, ವಿಶ್ವಾಮಿತ್ರ-ಮೇನಕಾ ಮತ್ತು ಬೆಸ್ತರ ನೃತ್ಯಗಳು ಇವು ಪ್ರಸಿದ್ಧಿ ಪಡೆದ ಇವರಿಬ್ಬರ ನತ್ಯಗಳು. ನೃತ್ಯ ವಿದ್ವಾಂಸರಲ್ಲದೆ ಸಾಮಾನ್ಯ ಜನರ ಪ್ರಶಂಸೆಗೂ ಈ ನೃತ್ಯಗಳು ಒಳಗಾಗಿದ್ದವು. ನಾಟ್ಯದ ಜೊತೆಗೆ ಇವರು ನೀಡುತ್ತಿದ್ದ ಗಾಯನ, ವೀಣಾವಾದನ, ಪಿಟೀಲು ಹಾಗೂ ಮೃದಂಗವಾದನಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ಕೊಡುತ್ತಿದ್ದವು. ಪತಿ ಪತ್ನಿಯರು ಜೊತೆ ಜೊತೆಯಾಗಿ ನೃತ್ಯ ಕಾರ್ಯಕ್ರಮ ನೀಡುವ ಪದ್ಧತಿ ಇಲ್ಲದ ಆ ಕಾಲದಲ್ಲಿ ಭಾರತದಾದ್ಯಂತ ಸಂಚರಿಸಿ ತಮ್ಮ ಅದ್ಭುತ ನೃತ್ಯ ಪ್ರದರ್ಶನಗಳನ್ನು ನೀಡಿದರು. ಇವರ ನೃತ್ಯ ಸಂಯೋಜನಾ ಕಲೆಯ ಕುರಿತು ಪ್ರತಿಷ್ಠಿತ ಪತ್ರಿಕೆಗಳು ಮುಕ್ತಕಂಠದಿಂದ ತಮ್ಮ ಪತ್ರಿಕೆಗಳಲ್ಲಿ ಪ್ರಶಂಸಿಸಿದವು.
ನೃತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗಾಗಿ ಹಲವಾರು ಬಿರುದು ಪ್ರಶಸ್ತಿಗಳು ಇವರಿಗೆ ದೊರಕಿವೆ. ಇವುಗಳಲ್ಲಿ ಭಾರತೀಯ ನೃತ್ಯ ಕಲಾ ಪರಿಷತ್ತಿನ ‘ನೃತ್ಯ ಕಲಾ ಶಿಲ್ಪ’, ಮಂಡ್ಯದ ಶಾಂತಲಾ ನೃತ್ಯ ಕಲಾ ಮಂದಿರದಿಂದ ‘ನಾಟ್ಯ ಕಲಾರತ್ನ’, ಮೈಸೂರು ಮಾರುತಿ ಸೇವಾ ಸಂಘದಿಂದ ‘ನಾಟ್ಯಕಲಾ ಪ್ರವೀಣ’ ಇವು ಮುಖ್ಯವಾದವುಗಳು. ಕೆ.ಎಸ್. ರಾಜಗೋಪಾಲ್ ದಂಪತಿಗಳು ಆರಂಭಿಸಿದ ಶ್ರೀ ನೃತ್ಯ ಕಲಾ ಮಂದಿರದಲ್ಲಿ ನೃತ್ಯ ಶಿಕ್ಷಣವನ್ನು ಪಡೆದು ಖ್ಯಾತರಾದ ದಂಪತಿಗಳು ಬಹಳಷ್ಟು ಮಂದಿ. ಶಾಂತ ಮತ್ತು ಧನಂಜಯನ್, ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ಮುಂತಾದವರು ಹೆಸರುವಾಸಿಯಾಗಿದ್ದಾರೆ.
ಕೆ.ಎಸ್. ರಾಜಗೋಪಾಲ್ ಇವರಿಗೆ ಸಾಹಿತ್ಯ ರಚನೆಯಲ್ಲಿಯೂ ಬಹಳಷ್ಟು ಆಸಕ್ತಿ ಇತ್ತು. ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಸುಮಾರು 8ರಿಂದ 10 ಕೃತಿಗಳನ್ನು ರಚಿಸಿದ್ದು ಮಾತ್ರವಲ್ಲದೆ ತಮಿಳಿನ ಹೆಸರಾಂತ ‘ತಾಯಿ ಯಶೋದೆ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಯಸ್ಸಾಗುತ್ತಾ ಹೋಗುತ್ತಿದ್ದ ಕಾರಣ ರಾಜಗೋಪಾಲರಿಗೆ ನೃತ್ಯ ಪಾಠವನ್ನು ಬೋಧಿಸುವುದು ಅಸಾಧ್ಯವಾಯಿತು. ಆದರೆ ಅವರ ಪತ್ನಿ ಜಯಂತಿಯವರು ಪತಿಯ ಮಾರ್ಗದರ್ಶನದಂತೆ ವಿವಿಧ ಕಡೆಗಳಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದರು. ತಮ್ಮ ನೃತ್ಯ ಶಾಲೆ ‘ಶ್ರೀ ನೃತ್ಯ ಕಲಾಮಂದಿರ’ದ ಮೂಲಕ ಹಲವಾರು ಹೊಸ ಪ್ರತಿಭೆಗಳನ್ನು ಕಲಾರಂಗಕ್ಕೆ ಪರಿಚಯಿಸಿದ ಕೆ.ಎಸ್. ರಾಜಗೋಪಾಲ್ ಹಾಗೂ ಅವರ ಪತ್ನಿ ಜಯಂತಿ ವ್ಯಾಸವಿಟ್ಟಲ್ ನೃತ್ಯ ಕಲೆಗೆ ಒಂದು ಹೊಸ ಆಯಾಮವನ್ನೇ ದೊರಕಿಸಿಕೊಟ್ಟವರು ಮತ್ತು ತಮ್ಮ ಶಿಷ್ಯಂದಿರ ಮೂಲಕ ದೇಶ ವಿದೇಶಗಳಲ್ಲಿ ನೃತ್ಯ ಕಲಾ ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.
– ಅಕ್ಷರೀ
