ಬೆಂಗಳೂರು : ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಮಹಾಗಣಪತಿ ಆಂಜನೇಯ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ವತಿಯಿಂದ ‘ರಾಜ್ಯ ಮಟ್ಟದ ನೃತ್ಯೋತ್ಸವ’ವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ದಿನಾಂಕ 04-02-2024ರಂದು ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂದಾಪುರದ ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿಯಾದ ಡಾ. ಅಶೋಕ್ ಶೆಟ್ಟಿ ವಹಿಸಿದ್ದರು. ನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ’ ಹಾಗೂ ‘ಸುವರ್ಣ ಶ್ರೀ ಕನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಸಮಾಜ ಸೇವಕ ಸೋಮನ್ ಎನ್.ಕೆ., ಷಣ್ಮುಗಂ ಎಂ., ಡಾ. ಮಮತಾ ಅಶೋಕ್, ಡಾ. ಪಿ. ಶ್ರೀಧರ್, ಶ್ರೀ ಮಹೇಂದರ್ ಮುಣೋತ್, ಬಾಲ ಪ್ರತಿಭೆ ಅಮೋಘ ಕೃಷ್ಣ ವಿ., ಡಾ. ಕೆಂಚನೂರು ಶಂಕರ್, ರಾಜ್ ಸಂಪಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧ ಕಡೆಗಳಿಂದ ನೃತ್ಯ ತಂಡಗಳು ಪ್ರದರ್ಶನ ನೀಡಿದವು.