ಮಡಿಕೇರಿ : ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕ ಮತ್ತು ಮುಂಬೈಯ ದಿ. ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ದಿನಾಂಕ 03 ಮೇ 2025ರಂದು ಬೆಳಗ್ಗೆ 10-00 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ನ ಸತ್ಕಾರ್ ಭವನದಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಈ ಸಮಾರಂಭದ ಆಶಯ ನುಡಿಗಳನ್ನಾಡುವರು. ಮುಂಬೈಯ ದಿ. ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟಿನ ಸಂಸ್ಥಾಪಕರಾದ ಶ್ರೀದೇವಿ ಚಂದ್ರಶೇಖರ್ ರಾವ್ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಂಬೈಯ ಸಾಹಿತಿ ಗೋಪಾಲ್ ತ್ರಾಸಿ ಇವರ ‘ನುಡಿ ತೇರು’ ಹಾಗೂ ದಿ. ಚಂದ್ರಶೇಖರ್ ರಾವ್ ಇವರ ‘ಹರಟೆಗಳು’ ಎನ್ನುವ ಎರಡು ಕೃತಿಗಳನ್ನು ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡುವರು. ಲೋಕಾರ್ಪಣೆಗೊಳ್ಳಲಿರುವ ಶ್ರೀ ಗೋಪಾಲ್ ತ್ರಾಸಿಯವರ ‘ನುಡಿ ತೇರು’ ಕೃತಿಯ ಬಗ್ಗೆ ಲೇಖಕಿಯಾಗಿರುವ ಮಂಡ್ಯದ ಶ್ವೇತಾ ಮತ್ತು ದಿ. ಚಂದ್ರಶೇಖರ್ ರಾವ್ ಅವರ ‘ಹರಟೆಗಳು’ ಕೃತಿಯ ಬಗ್ಗೆ ಮುಂಬೈಯ ಲೇಖಕಿ ಡಾ. ಜಿ.ಪಿ. ಕುಸುಮ ಕೃತಿ ಪರಿಚಯ ಮಾಡಲಿದ್ದಾರೆ.
ಸಾಹಿತಿ ಹಾಗೂ ರಂಗಭೂಮಿ ಕಲಾವಿದರೂ ಆಗಿರುವ ಮುಂಬೈ ಯೂನಿಯನ್ ಬ್ಯಾಂಕಿನ ಹಿರಿಯ ಪ್ರಬಂಧಕ ಗೋಪಾಲ್ ತ್ರಾಸಿ ಹಾಗೂ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟಿನ ಉಪಾಧ್ಯಕ್ಷ ಪ್ರತಾಪ್ ಶೇಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾಜ ಸೇವೆಗಾಗಿ ಪುಷ್ಪಾ ಕೃಷ್ಣಾನಂದ ಶೇಟ್ ಹಾಗೂ ನಿರೂಪಣಾ ಕೌಶಲ್ಯಕ್ಕಾಗಿ ಮುನೀರ್ ಅಹಮ್ಮದ್ ಇವರನ್ನು ಗೌರವಾರ್ಪಣೆಯೊಂದಿಗೆ ಸನ್ಮಾನಿಸಲಾಗುವುದು.
ಲೇಖಕಿ ಸ್ಮಿತಾ ಅಮೃತರಾಜ್ ಉದ್ಘಾಟನೆ ಕವಿತೆ ಹಾಡಲಿದ್ದು, ಮುಂಬೈಯ ಗೋಪಾಲ್ ತ್ರಾಸಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಕವಿ ಕಾವ್ಯ ಕಲರವ’ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ ಕವಿಗಳು ಭಾಗವಹಿಸಲಿದ್ದಾರೆ. ಮೂರ್ನಾಡಿನ ಶಿವಂ ನೃತ್ಯ ತಂಡ, ಮಡಿಕೇರಿಯ ಜನನಿ ಮತ್ತು ತಂಡದಿಂದ ಸಮೂಹ ನೃತ್ಯ ಹಾಗೂ ಕುಶಾಲನಗರದ ಸ್ನೇಹಸಿರಿ ಕಲಾ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಮರ್ಥ ಕನ್ನಡಿಗರು ಸಂಸ್ಥೆ ಕೊಡಗು ಜಿಲ್ಲಾ ಘಟಕದ ಪ್ರಧಾನ ಸಂಚಾಲಕಿ ಜಯಲಕ್ಷ್ಮಿ ಕೆ. ತಿಳಿಸಿದ್ದಾರೆ.