ಶಿವಮೊಗ್ಗ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ದಿನಾಂಕ 26 ಏಪ್ರಿಲ್ 2026ರಂದು ಶಿವಮೊಗ್ಗದ ನವ್ಯಶ್ರೀ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ಮಹಾನಾಯಕ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖೇನ ಉದ್ಘಾಟಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರಿನ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಇವರು ಮಾತನಾಡಿ “ಜಾತ್ಯಾತೀತವಾಗಿ, ಧರ್ಮಾತೀತವಾಗಿ ಅಂಬೇಡ್ಕರ್ ಸಾಮುದಾಯಿಕ ಚೈತನ್ಯವಾಗಿದ್ದಾರೆ. ಅವರು ಶೋಷಿತರ, ದಮನಿತರ, ಜನಸಾಮಾನ್ಯರ ಆಶಾಕಿರಣ, ಸಮಸಮಾಜದ ಪ್ರಜ್ಞೆಯಾಗಿದ್ದಾರೆ. ಇಂದು ಭಾರತದ ಮಹಾನಾಯಕ ಎಂದರೆ ಅಂಬೇಡ್ಕರ್. ಅವರೊಬ್ಬ ಸಂವಿಧಾನದ ಪಿತಾಮಹ ಮಾತ್ರವಲ್ಲ ರಾಜಕೀಯ. ಆರ್ಥಿಕ, ಸಾಮಾಜಿಕ, ಧಾರ್ಮಿಕ, ಪತ್ರಿಕೋದ್ಯಮ, ಕಾನೂನು ಕ್ಷೇತ್ರಗಳಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿ ಭಾರತದ ಮಹಾ ನಾಯಕರಾಗಿದ್ದಾರೆ. ಭಾರತೀಯ ಎಲ್ಲಾ ಭಾಷೆಗಳ ಸಾಹಿತ್ಯದಲ್ಲಿಯೂ ಕಾವ್ಯವಾಗಿ, ಕಥೆಯಾಗಿ, ಕಾದಂಬರಿಯಾಗಿ ಹರಿದಾಡಿದ್ದಾರೆ. ಇವರ ಆದರ್ಶಗಳೇ ಬಂಡಾಯ ಸಾಹಿತ್ಯಕ್ಕೆ ಉತ್ತೇಜನ ನೀಡಿ ಹೊಸದೊಂದು ಪ್ರಕಾರ ಹುಟ್ಟಲು ಕಾರಣವಾಯಿತು. ಕಾವ್ಯ ತಳಸಮುದಾಯದ ಅಥವಾ ಸಮಾಜದ ಕಟ್ಟಕಡೆಯ ಜೀವನದ ತಲ್ಲಣಗಳಿಗೆ ಸ್ಪಂದಿಸುವಂತಿರಬೇಕು. ಕವಿಯಾದವನಿಗೆ ಕಾವ್ಯೇತಿಹಾಸದ ಅರಿವು ಮುಖ್ಯ. ನಮ್ಮ ಪೂರ್ವಜರ ಕಾವ್ಯಾಭ್ಯಾಸ ಅವಶ್ಯಕ” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮಾತನಾಡಿ “ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ಸಂಪೂರ್ಣ ವಿರೋಧ ಮಾಡುತ್ತಿದ್ದ ಕೆಲವು ಸಂಘಟನೆಗಳು ಕೆಲವು ಜಾತಿಯವರು ಇಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತ ಅಂಬೇಡ್ಕರ್ ಅವರನ್ನು ತಮ್ಮವರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಇದು ಅಂಬೇಡ್ಕರ್ ರವರ ಮಹಾನ್ ವ್ಯಕ್ತಿತ್ವವನ್ನು ತೋರಿಸುತ್ತದೆ” ಎಂದರು.

ಮತ್ತೋರ್ವ ಮುಖ್ಯ ಅತಿಥಿ ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ.ಜಿ. ವೆಂಕಟೇಶ್ ಮಾತನಾಡಿ “ಅಂಬೇಡ್ಕರ್ ಅವರ ಶೂದ್ರರು ಯಾರು ಎಂಬ ಪುಸ್ತಕವನ್ನು ಈ ಸಾರಿ ಮತ್ತೊಮ್ಮೆ ನಾನು ಓದಿದೆ. ನಾವೆಲ್ಲಾ ಎಷ್ಟೊಂದು ಮೂಡನಂಬಿಕೆಯಿಂದ ಇದುವರೆಗೆ ಜೀವನ ಸಾಗಿಸಿದ್ದೇವೆ ಎಂದು ಅರ್ಥವಾಯಿತು ಎಂದ ಅವರು 35 ಜನ ಕವಿಗಳ ಕವನಗಳನ್ನು ಒಂದೊಂದು ಸಾಲಿನಲ್ಲಿ ವಿಮರ್ಶೆ ಮಾಡಿ ಗದ್ಯ ಮತ್ತು ಪದ್ಯದ ವ್ಯತ್ಯಾಸ ತಿಳಿಸಿ ಅನೇಕ ಕವಿಗಳ ಕವಿತೆ ವಿಷಯವನ್ನು ಹೇಳಿದ್ದರು ಕೂಡ ಗದ್ಯಶೈಲಿಯಲ್ಲಿದೆ ಅದನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿ ಅಂಬೇಡ್ಕರ್ ರವರಂತ ನಾಯಕರ ಬಗ್ಗೆ 35 ಕವನಗಳು ಬಂದಿರುವುದೇ ಅಂಬೇಡ್ಕರ್ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂಬುದಕ್ಕೆ ಸಾಕ್ಷಿ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಕೆ. ಹಸೀನಾರವರು ಮಾತನಾಡಿ ನಮ್ಮ ಕಾರ್ಯಕ್ರಮಕ್ಕೆ ಬೀದರ್ ಗುಲ್ಬರ್ಗ ರಾಯಚೂರು ಜಿಲ್ಲೆಯಿಂದ ಕೊಡಗು ಮಂಗಳೂರು ಜಿಲ್ಲೆಯಿಂದ ಕವಿಗಳು ಆಗಮಿಸಿದ್ದು ತುಂಬಾ ಸಂತೋಷ ತಂದಿದೆ. ಈ ರೀತಿ ಕವಿಗೋಷ್ಠಿ ನಡೆಯುವುದಕ್ಕೆ ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ರವರು ನೀಡಿದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಬಂದ ಸುಮಾರು 20ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಿದರು. ಕೇಂದ್ರ ಸಮಿತಿಯ ಟ್ರಸ್ಟಿಗಳಾದ ವಾಸು ಸಮುದ್ರವಳ್ಳಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಸುದರ್ಶನ, ರೂಪ ಹರಿಹರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ರೂಪ ಹರಿಹರ ಹಾಗೂ ಪ್ರತಿಭಾ ಸುದರ್ಶನ್ ಹಾಸನಗಳನ್ನು ವಿಶೇಷವಾಗಿ ಸನ್ಮಾನಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲೂಕು ಅಧ್ಯಕ್ಷೆ ಲತಮಾಣಿ ಎಂ.ಕೆ. ತುರುವೇಕೆರೆ ನಿರೂಪಿಸಿದರು. ಕವಯಿತ್ರಿ ಮಮತಾ ಎಚ್.ಎಂ. ನ್ಯಾಮತಿ ಸ್ವಾಗತಿಸಿದರು, ಕುವೆಂಪು ವಿವಿ ಪ್ರಥಮ ವರ್ಷದ ಎಂ.ಎ. ಇತಿಹಾಸ ಮತ್ತು ಪ್ರಾಕ್ತನಶಾಸ್ತ ವಿಭಾಗದ ವಿದ್ಯಾರ್ಥಿನಿ ಪ್ರಿಯದರ್ಶಿನಿ ಸ್ವಾಗತ ನೃತ್ಯ ಮಾಡಿದರು.

