ಉಡುಪಿ : ಕಟೀಲು ದೇವಳ, ಯಕ್ಷಗಾನ ಮೇಳದ ಯಜಮಾನರು, ಯಕ್ಷಗಾನ ಅಭಿಮಾನಿಗಳ ತಂಡ ತಿಂಗಳ ಹಿಂದೆ ಆರಂಭಿಸಿದ ಹಿರಿಯ ಕಲಾವಿದರ ಭೇಟಿಯ ‘ಸುಹೃತ್ ಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ನೇತೃತ್ವದ ತಂಡಕ್ಕೆ ದಿನಾಂಕ 19 ಸೆಪ್ಟೆಂಬರ್ 2026ರಂದು ಪ್ರಾಪ್ತವಾಯಿತು.
ಕಟೀಲು ಮೇಳದಲ್ಲಿ ದಶಕಗಳ ಕಾಲ ಕಲಾ ಸೇವೆಯನ್ನು ಮಾಡಿ ಈಗ ನಿವೃತ್ತರಾಗಿ ಮನೆಯಲ್ಲಿರುವ ಕಲಾವಿದರಿರುವಲ್ಲಿಗೆ ಹೋಗಿ ಅವರಿಗೆ ಕಟೀಲು ಮಾತೆಯ ಶೇಷವಸ್ತ್ರ ಸಮೇತ ಶ್ರೀಮುಡಿ ಗಂಧಪ್ರಸಾದ, ಅಕ್ಕಿ, ದವಸಧಾನ್ಯ ಫಲವಸ್ತು ಮತ್ತು ನಗದು ಪುರಸ್ಕಾರದೊಂದಿಗೆ ಗೌರವಿಸಿ ಅರ್ಧ-ಮುಕ್ಕಾಲು ಗಂಟೆ ಅವರೊಂದಿಗಿದ್ದು ಹಳೆಯ ನೆನಪು, ಕುಶಲೋಪರಿಯ ಮಾತುಗಳನ್ನಾಡಿ ಬರುವುದು ಈ ಯೋಜನೆಯ ಪರಿಕಲ್ಪನೆ. ನಿನ್ನೆ ಶ್ರೀ ಹರಿನಾರಾಯಣದಾಸ ಅಸ್ರಣ್ಣರ ನೇತೃತ್ವದ ತಂಡ ಬಡಗಿನ ಭಾಗದ ಹಿರಿಯ ಕಲಾವಿದರನ್ನು ಭೇಟಿಯಾಗಲು ಬಂದಾಗ ಕಲಾರಂಗದ ಪದಾಧಿಕಾರಿಗಳು ಅವರೊಂದಿಗೆ ಕೂಡಿಕೊಂಡು ನಾಲ್ವರು ಹಿರಿಯ ಸ್ತ್ರೀವೇಷಧಾರಿಗಳನ್ನು ಕಂಡು ಅವರಿಗೆ ಸಂತೋಷ ನೀಡಿ ಧನ್ಯರಾದೆವು. ಬೆಳಗ್ಗೆ 7-00 ಗಂಟೆಗೆ ಆರಂಭವಾದ ಈ ಯಾನ ಅಪರಾಹ್ನ 2-00 ಗಂಟೆಯವರೆಗೆ ಸಾಗಿತು. ಬೆಳಿಗ್ಗೆ 9-00 ಗಂಟೆಗೆ ಶಂಕರನಾರಾಯಣದ ಸಮೀಪ ಪತ್ನಿಯೊಂದಿಗೆ ಚಿಕ್ಕ ಮನೆಯಲ್ಲಿರುವ ಸಂಜೀವ ಬಳೆಗಾರರನ್ನು ಭೇಟಿಯಾದೆವು. ತಮ್ಮ ಗುಡಿಸಿಲಿಗೆ ಇಷ್ಟು ದೊಡ್ಡತಂಡ ಬಂದು ಸತ್ಕರಿಸಿದ್ದನ್ನು ನೋಡಿ ಸತಿಪತಿಯರಿಬ್ಬರೂ ಸಂತಸ ಮತ್ತು ಮುಜುಗರದಿಂದ ಅಕ್ಷರಾರ್ಥದಲ್ಲಿ ಕಣ್ಣೀರು ಸುರಿಸಿದರು. ಅವರು ಯಕ್ಷಗಾನದ ತಿರುಗಾಟ, ಒಡನಾಡಿ ಕಲಾವಿದರು, ಕಟೀಲು ಮೇಳದ ತನ್ನ ಅನುಭವವನ್ನು ಹಂಚಿಕೊಂಡರು.

ಅನಂತರ ಗಾವಳಿಯಲ್ಲಿ ಮಗಳು, ಮೊಮ್ಮಕ್ಕಳೊಂದಿಗಿರುವ ಬಾಬು ಕುಲಾಲರನ್ನು ಭೇಟಿಯಾದೆವು. ವರ್ಷದ ಹಿಂದೆ ಸಾವನ್ನು ಗೆದ್ದುಬಂದ ಕುಲಾಲರು ಲವಲವಿಕೆಯಲ್ಲಿರುವುದನ್ನು ನೋಡಿ ಸಂತೋಷವಾಯಿತು. ತಾವು ಕಟೀಲು ಮೇಳ ಸೇರಿದ ಸಂದರ್ಭ, ಆಗ ಬಲಿಪ ನಾರಾಯಣ ಭಾಗವತರು ಸಂಜೆ ಏಳು ಗಂಟೆಗೆ ಮೊದಲೇ ಬಂದು ಎಲ್ಲ ಕಲಾವಿದರಿಗೆ ನಿರ್ದೇಶನ ಮಾಡಿ ಬೆಳಿಗ್ಗೆ ಏಳು ಗಂಟೆಯವರೆಗೆ ಒಬ್ಬರೇ ಭಾಗವತಿಕೆ ಮಾಡುತ್ತಿದ್ದದನ್ನು ನೆನಪಿಸಿಕೊಂಡು ಅಂತಹ ಮಹಾಗುರುವಿನ ಶಿಷ್ಯನೆನ್ನಲು ಅಭಿಮಾನ ಪಡುತ್ತೇನೆಂದು ಹನಿಗಣ್ಣಾದರು. ನಮಗೆ ಬಲಿಪ ಭಾಗವತರು ಯಕ್ಷಗಾನಕ್ಕೆ ನೀಡಿದ ಕೊಡುಗೆಯ ವಿರಾಡ್ದರ್ಶನವಾಯಿತು.

ಮಧ್ಯಾಹ್ನ 12-00 ಗಂಟೆಗೆ ಉಡುಪಿಯಲ್ಲಿ ಪುಂಡರೀಕಾಕ್ಷ ಉಪಾಧ್ಯಾಯರ ಭೇಟಿ. ಇಳಿವಯಸ್ಸಿನಲ್ಲೂ ಅವರ ಜೀವನೋತ್ಸಾಹ ಕಂಡು ಬೆರಗಾದೆವು. ಸುಮಾರು ಒಂದು ತಾಸು ಅವರೊಂದಿಗಿದ್ದು ಅವರ ಯಕ್ಷಪಯಣದ ಕತೆಯನ್ನು ಕುತೂಹಲದಿಂದ ಆಲಿಸಿದೆವು. ಮುಂದೆ ನಮ್ಮ ಪಯಣ ಇನ್ನಂಜೆಯಲ್ಲಿ ವಾಸವಾಗಿರುವ 95ರ ಹರೆಯದ ಕೋಳ್ಯೂರು ರಾಮಚಂದ್ರ ರಾಯರ ಮನೆಗೆ. ಇಳಿ ವಯಸ್ಸಿನಲ್ಲಿ ತಂದೆ ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕೆಂಬುದಕ್ಕೆ ಕೋಳ್ಯೂರರ ಮಕ್ಕಳು ಮಾದರಿ. ಅವರ ಮಕ್ಕಳೆಲ್ಲ ಸೇರಿ ನಮ್ಮನ್ನು ಸ್ವಾಗತಿಸಿದರು. ಆ ಮನೆಯಲ್ಲಿ ಕೋಳ್ಯೂರಿಗೆ ಸಂದ ಪ್ರಶಸ್ತಿ, ಸಮ್ಮಾನಗಳನ್ನು ಒಪ್ಪ ಓರಣವಾಗಿ ಇಟ್ಟರೀತಿ, ವೇಷದ ಭಂಗಿಗಳಿಂದ ಹಳೆಯ ನೆನಪು ಸ್ಮೃತಿಪಟಲದಲ್ಲಿ ಹಾದು ಹೋಯಿತು. ನಮಗಾಗಿ ವಿಶೇಷ ಔತಣದ ವ್ಯವಸ್ಥೆಯನ್ನು ಮಾಡಿದ್ದರು. ಅವರ ಪ್ರೀತಿಯ ಆತಿಥ್ಯ ಸ್ವೀಕರಿಸಿ ಮಹಾನ್ ಕಲಾವಿದರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಕಳೆದು ಹಿರಿಯ ಜೀವಕ್ಕೆ ಆನಂದ ನೀಡಿ ಪುಳಕಿತಗಾತ್ರರಾದೆವು. ಕಟೀಲು ಮಾತೆಯ ಅನನ್ಯ ಭಕ್ತರೂ, ಆಸ್ರಣ್ಣ ಕುಟುಂಬದ ಕುರಿತು ಅತ್ಯಂತ ಗೌರವ ಭಾವ ಉಳ್ಳವರೂ ಆಗಿರುವ ಉಪಾಧ್ಯಾಯರು ಮತ್ತು ಕೋಳ್ಯೂರರು ತಮ್ಮ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಬಂದು ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಶ್ರೀದೇವಿಯ ಗಂಧಪ್ರಸಾದ ನೀಡಿ ಹರಸಿದ್ದಕ್ಕೆ ಭಾವುಕರಾಗಿ ಕೃತಜ್ಞತೆ ಹೇಳಿದರು. ಬಾಳ ಮುಸ್ಸಂಜೆಯಲ್ಲಿರುವ ಈ ಎಲ್ಲಾ ಹಿರಿಯ ಕಲಾವಿದರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಗೌರವದ ಉಡುಗೊರೆ ನೀಡಿ ಆಶೀರ್ವಾದ ಪಡೆದೆವು. ಒಂದು ಸಾರ್ಥಕ ದಿನ ಉತ್ತರಿಸಿದ ಸಂತೋಷಕ್ಕೆ ಭಾಜನರಾದೆವು.
