02 ಮಾರ್ಚ್ 2023, ಉಡುಪಿ: ಹಳೆಬೇರು ಹೊಸಚಿಗುರಿನ ಸಮಾಗಮವೇ ಸುಮನಸಾ: ಗೋಪಾಲ ಸಿ. ಬಂಗೇರ
ಅನುಭವದಿಂದ ಮಾಗಿದ ಹಿರಿಯರನ್ನು, ಹೊಸಚೈತನ್ಯದ ಯುವಜನರನ್ನು, ಪುಟ್ಟ ಮಕ್ಕಳನ್ನು ಸೇರಿಸಿಕೊಂಡು ಮುನ್ನಡೆಯುತ್ತಿರುವ ಸುಮನಾಸವು ಹಳೆಬೇರು ಹೊಸಚಿಗುರಿನ ಸಮಾಗಮ ಎಂದು ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಬುಧವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈ ಸಂಸ್ಥೆಗೂ ನನಗೂ ಅವಿನಾಭಾವ ಸಂಬಂಧ. ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಸಂಘಟಿತರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸುಮನಸಾದ ಶಿಸ್ತು, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ’ ಎಂದು ಶ್ಲಾಘಿಸಿದರು.
ರಂಗಸನ್ಮಾನ ಸ್ವೀಕರಿಸಿದ ನಾರಾಯಣ ಪ್ರಭು ಗುಳ್ಮೆ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದವನು. ನಿರ್ದೇಶಿಸಿದವನು. ಆದರೂ ಯಕ್ಷಗಾನದ ಕಡೆಗೆ ಒಲವು ಜಾಸ್ತಿ. ಕರಾವಳಿಯ ಶ್ರೇಷ್ಠ ಕಲೆ ವಿಶ್ವಕ್ಕೆ ಮುಟ್ಟಿರುವ ಕಲೆ ಯಕ್ಷಗಾನ. ಅದು ತಾತ್ಕಾಲಿಕ ಮನರಂಜನೆ ಅಲ್ಲ. ಜನಮನಕ್ಕೆ ಸುವಿಚಾರವನ್ನು ಬೋಧಿಸುವ ಮೂಲಕ ಧರ್ಮಪ್ರಜ್ಞೆ ಜಾಗೃತಗೊಳಿಸುತ್ತದೆ. ಜೀವನದ ಮೌಲ್ಯ, ಜೀವನ ತತ್ವ, ನೀತಿ ಬೋಧನೆ, ಪುರಾಣಪ್ರಜ್ಞೆ, ಆತ್ಮೋಪದೇಶದ ಮೂಲಕ ಜನತಾ ಕಲ್ಯಾಣವನ್ನು ಸಾಧಿಸುವುದೇ ಯಕ್ಷಗಾನದ ಪ್ರಧಾನ ಉದ್ದೇಶ’ ಎಂದರು.
ಹೊಳ್ಳ ಅಸೋಸಿಯೇಟ್ಸ್‌ನ ಟಿ. ಪ್ರಶಾಂತ್ ಹೊಳ್ಳ, ಕಿದಿಯೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಹರೀಶ್ ಎಂ.ಕೆ. ಕಲ್ಮಾಡಿ, ಉದ್ಯಮಿ ವಿನಯ್ ಕರ್ಕೇರ, ಕೊಡವೂರು ವ್ಯವಸಾಯ ಸೇವಾ ಸಂಘದ ನಿರ್ದೇಶಕ ದಿನೇಶ್ ಪೈ, ಸುಮನಸಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ದಿವಾಕರ ಕಟೀಲು ಸ್ವಾಗತಿಸಿದರು. ಮುರುಗೇಶ್ ವಂದಿಸಿದರು. ಅಕ್ಷತ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ವತಿಯಿಂದ ಏಕಲವ್ಯ ಯಕ್ಷಗಾನ ಪ‍್ರದರ್ಶನಗೊಂಡಿತು.
ಮಾರ್ಚ್ 01, ಬುಧವಾರ – ಏಕಲವ್ಯ – ಕನ್ನಡ ಯಕ್ಷಗಾನ
ತಂಡ: ಸುಮನಸಾ ಕೊಡವೂರು ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ