ಕಾರ್ಕಳ : ಕನ್ನಡದ ಮಹತ್ವದ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ್ ಅವರ ಹೆಸರಿನಲ್ಲಿ ಧಾರವಾಡದ ‘ಸಾಹಿತ್ಯ ಗಂಗಾ’ ಸಂಸ್ಥೆಯು ಈ ವರ್ಷದಿಂದ ನೀಡುತ್ತಿರುವ ಸುನಂದಾ ಬೆಳಗಾಂವಕರ್ ಕಾದಂಬರಿ ಪ್ರಶಸ್ತಿಗೆ ಡಾ.ನಾ.ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು ಆಯ್ಕೆಯಾಗಿದ್ದು, ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08-06-2024 ರಂದು ಕಾರ್ಕಳದ ಪ್ರಕಾಶ್ ಹೋಟೇಲಿನ ‘ಸಂಭ್ರಮ’ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಮೊಗಸಾಲೆಯವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ಖ್ಯಾತ ಇತಿಹಾಸ ತಜ್ಞ ಹಾಗೂ ವಾಗ್ಮಿಗಳಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ “ತನ್ನ 18ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿಲೋಕಕ್ಕೆ ಪಾದಾರ್ಪಣೆಗೈದ ಡಾ. ನಾ. ಮೊಗಸಾಲೆಯವರು ಈಗಾಗಲೇ ತಮ್ಮ 22 ಕಾದಂಬರಿಗಳೊಂದಿಗೆ ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಸಾಕಷ್ಟು ಕೃಷಿ ಮಾಡಿ ನಾಡಿನ ಪ್ರಮುಖ ಸೃಜನಶೀಲ ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ.” ಎಂದರು .
ಅಭಿನಂದನಾ ಭಾಷಣಗೈದ ‘ಸಾಹಿತ್ಯ ಗಂಗಾ’ ಸಂಸ್ಥೆಯ ಮುಖ್ಯಸ್ಥರಾದ ವಿಕಾಸ ಹೊಸಮನಿ ಮಾತನಾಡಿ “ಮೊಗಸಾಲೆಯವರ ಪ್ರತಿಯೊಂದು ಕಾದಂಬರಿಯೂ ವಿಭಿನ್ನ ಪ್ರಯೋಗಶೀಲತೆಯಿಂದ ಕೂಡಿದ್ದು ಕಾದಂಬರಿ ಪ್ರಕಾರಕ್ಕೆ ಮಾದರಿಗಳಾಗಿವೆ. ವಿಶೇಷವಾಗಿ ಕರಾವಳಿಯ ಎಲ್ಲ ಪ್ರಸಿದ್ಧ ಸಾಹಿತಿಗಳನ್ನೂ ನಾವಿಂದು ಮೊಗಸಾಲೆಯವರಲ್ಲಿ ಕಾಣಬಹುದಾಗಿದ್ದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರಿಂದ ಇನ್ನಷ್ಟು ಕಾದಂಬರಿಗಳು ಬೆಳಕು ಕಾಣುವಂತಾಗಲಿ.” ಎಂದು ಶುಭ ಹಾರೈಸಿದರು.
ಡಾ. ನಾ. ಮೊಗಸಾಲೆಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅ. ಭಾ. ಸಾ. ಪ. ಇದರ ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅ. ಭಾ. ಸಾ. ಪ. ಇದರ ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಸಾಹಿತ್ಯ ಸಂಘ ಕಾರ್ಕಳದ ಅಧ್ಯಕ್ಷರಾದ ಶ್ರೀ ಕೆ. ಪಿ. ಶೆಣೈ, ಕ. ಸಾ. ಪ. ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ ಕೊಂಡಳ್ಳಿ, ದಿ. ಸುನಂದಾ ಬೆಳಗಾಂವಕರ ಅವರ ಸುಪುತ್ರಿ ಶ್ರೀಮತಿ ವೈಜಯಂತಿಯವರು ಉಪಸ್ಥಿತರಿದ್ದರು.
ಶ್ರೀ ಸುಭಾಷ್ ಪಟ್ಟಾಜೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ತೀರ್ಪುಗಾರರ ಟಿಪ್ಪಣಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣರಾವ್ ಸ್ವಾಗತಿಸಿ, ಸದಾನಂದ ನಾರಾವಿ ನಿರೂಪಿಸಿ, ರೇವಣಸಿದ್ದಪ್ಪ ಜಿ. ಆರ್. ವಂದಿಸಿದರು.