ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಸಂಗೀತ ಘಟಕವಾದ ಸ್ವರ ಚಿನ್ನಾರಿ ಏರ್ಪಡಿಸಿದ ಪ್ರಸಿದ್ಧ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಂಡೋಲಿನ್ ವಾದಕ, ಸಂಗೀತ ನಿರ್ದೇಶಕ ಎನ್.ಎಸ್.ಪ್ರಸಾದ್ ನೇತೃತ್ವದ ಸ್ವರ ಸಂಗೀತ ಶಿಬಿರವಾದ ‘ಸ್ವರ ಸಂಚಾರ’ ಕಾರ್ಯಕ್ರಮ ದಿನಾಂಕ 28.10.2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಾನ ಪ್ರವೀಣ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮಾತನಾಡುತ್ತಾ “ಸಂಗೀತವು ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಹಿಂದೆಲ್ಲ ರಾಜಾಶ್ರಯದಲ್ಲಿ ಸಂಗೀತ ಬೆಳೆದು ಬಂದಿತ್ತು. ಇಂದು ರಾಜಾಶ್ರಯವಿಲ್ಲದಿದ್ದರೂ ಸಂಗೀತ ಪ್ರೇಮಿಗಳ ಹಾಗೂ ಕೆಲವು ಸಂಘಟನೆಗಳ ಮೂಲಕ ಸಂಗೀತ ಬೆಳೆದು ಬರುತ್ತಿದೆ. ಅಂತಹ ಕಾರ್ಯದಲ್ಲಿ ರಂಗಚಿನ್ನಾರಿಯ ಅಂಗವಾಗಿರುವ ‘ಸರ ಚಿನ್ನಾರಿ’ ಮಹತ್ವದ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವರ ಚಿನ್ನಾರಿ ಗೌರವಧ್ಯಕ್ಷ ಶ್ರೀ ಕೃಷ್ಣಯ್ಯ ಅನಂತಪುರ ಅವರು ಮಾತನಾಡಿ “ಸಂಗೀತ ಸಾಗರ. ಸಾಗರವೇ ದೊಡ್ಡ ಸಂಗೀತ. ತೆರೆಗಳೇ ಲಯಕ್ಕೆ ಮೂಲಾಧಾರ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಆಯೋಜಿಸಲಾಗಿದ್ದ ಕನ್ನಡ ಹೋರಾಟಗಾರ, ಕವಿ ಎಂ.ಗಂಗಾಧರ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ರಂಗ ಚಿನ್ನಾರಿ ನಿರ್ದೇಶಕ, ಪ್ರಸಿದ್ಧ ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಸಂಸ್ಮರಣಾ ಭಾಷಣ ಮಾಡಿ, “ಪತ್ರಕರ್ತರಾಗಿ, ಕವಿಯಾಗಿ, ಕಾಸರಗೋಡಿನಲ್ಲಿ ಕನ್ನಡದ ಹೋರಾಟದ ಕಿಚ್ಚನ್ನು ಸದಾ ಹಸಿರಾಗಿರಿಸಿದ ಕೀರ್ತಿ ಗಂಗಾಧರ ಭಟ್ ಅವರಿಗೆ ಸಲ್ಲುತ್ತದೆ” ಎಂದರು.
ಮಣಿಪಾಲದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ವಿದುಷಿ ಉಮಾಶಂಕರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀರಕ್ಷಾ ಸರ್ಪಂಗಳ ಪ್ರಾರ್ಥನೆ ಹಾಡಿದರು. ಸ್ವರ ಚಿನ್ನಾರಿ ಕಾರ್ಯಾಧ್ಯಕ್ಷ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಿ, ಸ್ವರ ಚಿನ್ನಾರಿ ಕಾರ್ಯದರ್ಶಿ ಕಿಶೋರ್ ಪೆರ್ಲ ವಂದಿಸಿ, ಜೊತೆ ಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸಂಗೀತ ಸ್ವರಗಳ ಕಲಿಕೆಯ ಬಗ್ಗೆ ಎನ್.ಎಸ್.ಪ್ರಸಾದ್ ಶಿಬಿರಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು.
ಸಂಜೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಗಮಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವಚನ ನೀಡಿದರು ಮತ್ತು ಸ್ವರಚಿನ್ನಾರಿಯಂತಹ ಸಂಗೀತ ಘಟಕ ಕಾಸರಗೋಡಿನ ಮಣ್ಣಿನ ಕಲೆ ಮತ್ತು ಕಲಾವಿದರನ್ನು ಪೋಷಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿರುವುದು ಪ್ರಶಂಸನೀಯ ಎಂದು ಹೇಳಿದರು. ತರಬೇತಿ ನೀಡಿದ ಎನ್.ಎಸ್. ಪ್ರಸಾದ್ ಅವರಿಗೆ ಎಡನೀರು ಶ್ರೀಗಳಿಂದ ಸನ್ಮಾನ ನಡೆಯಿತು. ಕೊನೆಯದಾಗಿ ರಂಗಚಿನ್ನಾರಿ ನಿರ್ದೇಶಕರು ಕಾಸರಗೋಡು ಚಿನ್ನಾ ಇವರು ಸ್ವರಚಿನ್ನಾರಿಯ ಮೊದಲ ಸರಣಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಸಂತೋಷ ವ್ಯಕ್ತಪಡಿಸಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.