ಧಾರವಾಡ : ತಮ್ಮ ರಚಿತ ಮತ್ತು ನಿರ್ದೇಶಿತ ನಾಟಕಗಳಾದ ‘ಗತಿ’ ಮತ್ತು ‘ಅತೀತ’ ಮೂಲಕ ಧಾರವಾಡದ ರಂಗಾಸಕ್ತರಿಗೆ ಚಿರಪರಿಚಿತರಾಗಿರುವ ಎಸ್.ಎನ್. ಸೇತುರಾಮ್ ಅವರು ತಮ್ಮ ಹೊಸ ನಾಟಕ ‘ತಳಿ’ ತೆಗೆದುಕೊಂಡು ಧಾರವಾಡಕ್ಕೆ ಬರುತ್ತಿದ್ದಾರೆ.
ದಿನಾಂಕ 26 ಮಾರ್ಚ್ 2025, ಬುಧವಾರ ಸಂಜೆ 06-30 ಗಂಟೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಸ್ನೇಹ ಪ್ರತಿಷ್ಠಾನ ಧಾರವಾಡ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಅನನ್ಯ ಸಂಸ್ಥೆ ಬೆಂಗಳೂರು ಅರ್ಪಿಸುತ್ತಿರುವ ಈ ನಾಟಕ ‘ತಳಿ’ ಖಂಡಿತವಾಗಿ ಧಾರವಾಡದ ರಂಗಪ್ರೇಮಿಗಳಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಹಿನ್ನೆಲೆಯಲ್ಲಿ ಅತ್ಯುತ್ತಮ ಕೊಡುಗೆ.
ಎಸ್.ಎನ್. ಸೇತುರಾಂ ಒಬ್ಬ ಕನ್ನಡದ ಕಥೆಗಾರ, ನಟ, ನಿರ್ದೇಶಕ ಮತ್ತು ನಾಟಕಕಾರ. ಬಾಲ್ಯದಿಂದಲೂ ರಂಗಭೂಮಿಯ ಕಡೆಗಿನ ಸೆಳೆತ ಇವರನ್ನು 1981ರಿಂದ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಟಿ.ಎನ್. ಸೀತಾರಾಂರವರ ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳಲ್ಲಿ ಇವರು ಅಭಿನಯಿಸಿದ್ದಾರೆ. ಮಂಥನ, ದಿಬ್ಬಣ ಮತ್ತು ಅನಾವರಣ ಧಾರಾವಾಹಿಗಳನ್ನು ಇವರು ನಿರ್ದೇಶಿಸಿದ್ದಾರೆ. ಇವರು ರಚಿಸಿದ ನಾಟಕಗಳು ‘ನಿಮಿತ್ತ’, ‘ಗತಿ’ ‘ಅತೀತ’. ಇವರು ಬರೆದ ‘ನಿಮಿತ್ತ’ ನಾಟಕವು ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಪದವಿ ತರಗತಿಗೆ ಪಠ್ಯವಾಗಿದೆ. ಇವರ ಎರಡು ಕಥಾಸಂಕಲನಗಳು ಪ್ರಕಟವಾಗಿವೆ: ನಾವಲ್ಲ – 2017, ದಹನ – 2018. ಇವರ ಸಣ್ಣ ಕಥಾ ಸಂಕಲನ ‘ನಾವಲ್ಲ’ ಆರು ಮುದ್ರಣ ಕಂಡು ‘ಮಾಸ್ತಿ ಕಥಾ ಪುರಸ್ಕಾರ’ ಪಡೆದಿದೆ.
“ತಳಿ” ನಾಟಕ ಸಾರಾಂಶ:
“ಸಾಕು ಸಾಕೆನಿಸಿದೆ” ಎಂಬ ಮಾತಿನಿಂದ ಆರಂಭವಾಗುವ ನಾಟಕ ‘ತಳಿ’ ನೋವಲ್ಲಿ ಹರಿದು, ಸೂತಕದಲ್ಲಿ ಕೊನೆ ಕಾಣುತ್ತದೆ. ಆ ಸೂತಕವೂ ಸಂಭ್ರಮವೇ ! ಸಮಾಜದ ಕೆಲವು ಕೆಟ್ಟ ಬೀಜಗಳು ಊರಿ, ಚಿಗುರಿ, ಗಿಡವಾಗಿ, ಹೆಮ್ಮರವಾಗಿ, ನೆಲದಾಳದಿ ತಮ್ಮ ವಿಷದ ಬೇರನ್ನು ಹರಡಿ ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡುವ ದು:ಸ್ಥಿತಿಯನ್ನು ಪಸರಿಸುವ ‘ತಳಿ’ಗಳ ಸಂತಾನವೇ, ನಾಟಕದ ಹೂರಣ. ನಾಟಕದುದ್ದಕ್ಕೂ ಸೇತುರಾಮರ ಮಾತಿ ಛಾಪು ಇಲ್ಲೂ ವಿಸ್ತರಿಸಿದೆ.
ಪ್ರವೇಶ ಧನ ₹ 200/- ಮತ್ತು ₹ 100/- ಇದ್ದು ಟಿಕೀಟುಗಳಿಗಾಗಿ ಮತ್ತು ಹೆಚ್ಚಿನ ವಿವರಗಳಿಗಾಗಿ ಶ್ರೀ ಹರ್ಷ ಡಂಬಳ (9845703404) ಅಥವಾ ಶ್ರೀ ಸಮೀರ ಜೋಶಿ (9845447002) ಅವರನ್ನು ಸಂಪರ್ಕಿಸಬಹುದು.