ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಇದರ ವತಿಯಿಂದ ‘23ನೇ ವಾರ್ಷಿಕ ಸಂಭ್ರಮ’ ಕಾರ್ಯಕ್ರಮವು ದಿನಾಂಕ 11 ಆಗಸ್ಟ್ 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಹಿರಿಯ ರಂಗಭೂಮಿ ಕಲಾವಿದ, ಸಿನಿಮಾ ತಂತ್ರಜ್ಞ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್ ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ತೌಳವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಗೌರವಧನ ವಿತರಣೆ ನಡೆಯಿತು. ಸಮಾರಂಭದಲ್ಲಿ ಹಿರಿಯ ನಾಟಕಕಾರ ನಿರ್ದೇಶಕರಾದ ಡಾ. ಸಂಜೀವ ದಂಡೆಕೇರಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲ. ಕಿಶೋರ್ ಡಿ ಶೆಟ್ಟಿ, ಲ. ಲೋಕೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಜಯಕೃಷ್ಣ ಜಿ. ಕೋಟ್ಯಾನ್, ಒಕ್ಕೂಟದ ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಲ. ಗೋಕುಲ್ ಕದ್ರಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ಕೋಶಾಧಿಕಾರಿ ಲ. ಮೋಹನ್ ಕೊಪ್ಪಲ ಕದ್ರಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸುಗಮ ಸಂಗೀತ ಹಾಗೂ ಉಮೇಶ್ ಮಿಜಾರ್ ಇವರ ‘ನಮ್ಮ ಕಲಾವಿದರರ್ ಬೆದ್ರ’ ಇವರಿಂದ ‘ವೈರಲ್ ವೈಶಾಲಿ’ ನಾಟಕ ಪ್ರದರ್ಶನಗೊಂಡಿತು.

