ಬೆಂಗಳೂರು : ಮಂಗಳೂರಿನ ಬಲ್ಲಾಲ್‌ಬಾಗ್ ಇಲ್ಲಿರುವ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ, ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಕರಾವಳಿಯ 17 ಪ್ರತಿಭಾವಂತ ಕಲಾವಿದರ ಸಂಗ್ರಹವನ್ನು ಒಳಗೊಂಡಿರುವ ‘ಟ್ರಾನ್ಸ್ ಪೋಸಿಂಗ್ ಎಕ್ಸ್ ಪೀರಿಯೆನ್ಸ್’ (ಪರಿವರ್ತನೆ ಅನುಭವಗಳು) ಎಂಬ ಪ್ರದರ್ಶನವು ದಿನಾಂಕ 03-02-2024 ಮತ್ತು 04-02-2024ರಂದು ನಡೆಯಿತು. ಈ ಕಲಾ ಪ್ರದರ್ಶನವನ್ನು ಖ್ಯಾತ ಕಲಾ ಇತಿಹಾಸಕಾರರಾದ ರಜನಿ ಪ್ರಸನ್ನ ಅವರು ದಿನಾಂಕ 03-02-2024ರ ಶನಿವಾರದಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ (BIC) ನಲ್ಲಿ ಉದ್ಘಾಟಿಸಿದರು.
ಈ ಕಾರ್ಯಕ್ರಮವು ಭಾಷಾ ರೋಗ ತಜ್ಞ ಡಾ. ಪ್ರತಿಭಾ ಕಾರಂತ್, ಸಂರಕ್ಷಣಾ ಪ್ರಾಣಿಶಾಸ್ತ್ರಜ್ಞ ಡಾ. ಉಲ್ಲಾಸ್ ಕಾರಂತ್ ಮತ್ತು ಶ್ರೀ ಪ್ರಸನ್ನ ಸೇರಿದಂತೆ ಇತರ ಗಣ್ಯ ಅತಿಥಿಗಳ ಉಪಸ್ಥಿತಿಗೆ ಸಾಕ್ಷಿಯಾಯಿತು. ಆರ್ಟ್ ಕೆನರಾ ಟ್ರಸ್ಟ್ ಆಯೋಜಿಸಿರುವ ಈ ಪ್ರದರ್ಶನವು ಕರಾವಳಿ ಕರ್ನಾಟಕದ ಬೇರುಗಳನ್ನು ಹೊಂದಿರುವ 17 ಕಲಾವಿದರು ರಚಿಸಿದ ವರ್ಣ ಚಿತ್ರಗಳು, ಶಿಲ್ಪಗಳು, ಛಾಯಾಚಿತ್ರಗಳು ಮತ್ತು ಇನ್ ಸ್ವಾಲೇಶನ್ ಆರ್ಟ್ ಗಳ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.
ಶ್ರೀಮತಿ ರಜನಿ ಪ್ರಸನ್ನ ಅವರು ತಮ್ಮ ಆರಂಭಿಕ ಭಾಷಣದಲ್ಲಿ ಕರಾವಳಿಯ ಕಲಾವಿದರನ್ನು ಪೋಷಿಸುವ ಮಹತ್ವವನ್ನು ಒತ್ತಿ ಹೇಳಿದರು. “ಕರಾವಳಿ ಕರ್ನಾಟಕದ ಯುವ ಸಮಕಾಲೀನ ಕಲಾವಿದರ ಪ್ರತಿಭೆಯನ್ನು ಗುರುತಿಸಬೇಕು ಮತ್ತು ಅನನ್ಯ ಕಲಾಕೃತಿಗಳನ್ನು ರಚಿಸುವುದನ್ನು ಮುಂದುವರಿಸಲು ಮತ್ತು ಪ್ರೋತ್ಸಾಹಿಸಲು ಅವರನ್ನು ಜನಪ್ರಿಯ ಸಾಂಸ್ಕೃತಿಕ ನಕ್ಷೆಯಲ್ಲಿ ತರಬೇಕು” ಎಂದು ಅವರು ಹೇಳಿದರು. ಕರಾವಳಿ ಕರ್ನಾಟಕದ ಖ್ಯಾತ ಕಲಾವಿದರಾದ ಕೆ.ಕೆ. ಹೆಬ್ಬಾರ್ ಮತ್ತು ಶಿವರಾಮ ಕಾರಂತರ ಕೊಡುಗೆಯನ್ನು ಅತಿಥಿಗಳು ಗೌರವಿಸಿದರು. ಆರ್ಟ್ ಕೆನರಾ ಟ್ರಸ್ಟಿನ ಸುಭಾಸಚಂದ್ರ ಬಸು ಕಾರ್ಯಕ್ರಮ ನಿರೂಪಿಸಿದರು.
ಕಲಾವಿದರಾದ ಹರೀಶ್ ಕೊಡಿಯಾಲ್ಬೈಲ್, ಜನಾರ್ದನ್ ಹಾವಂಜೆ, ಜಯವಂತ ಶೆಟ್ಟಿಗಾರ್, ಜೀವನ್ ಸಾಲಿಯಾನ್, ನೇಮಿರಾಜ್ ಶೆಟ್ಟಿ, ಪೆರ್ಮುದೆ ಮೋಹನ್ ಕುಮಾರ್, ಪ್ರವೀಣ್ ಪುಂಚಿತ್ತಾಯ, ರಾಜೇಂದ್ರ ಕೇದಿಗೆ, ರಾಮಕೃಷ್ಣ ನಾಯಕ್, ರೇಷ್ಮಾ ಎಸ್.ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾ ಭಟ್, ಉಮೇಶ್ ವಿ.ಎಂ., ವೆಂಕಿ ಪಲಿಮಾರ್, ವಿಶ್ವಾಸ್ ಎಂ. ಮತ್ತು ವಿಲ್ಸನ್ ಡಿ’ಸೋಜಾ ಭಾಗವಹಿಸಿದ್ದರು.