ಉಡುಪಿ : ಉಡುಪಿ ರಥಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ಹಾಗೂ ಸಂಗಮ ಜಾನಪದ ಕಲಾಮೇಳ ಕಲ್ಮಾಡಿ ಉಡುಪಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ದಿನಾಂಕ 21-05-2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ “ಭಗವಂತನನ್ನು ಒಲಿಸುವ ಸುಲಭ ಮಾರ್ಗವೇ ಭಜನೆ. ಭಗವಂತನ ನಾಮ ಸ್ಮರಣೆಯನ್ನು ನಿರಂತರ ಭಜಿಸುವವರಿಗೆ ಮೋಕ್ಷವನ್ನೂ ಕರುಣಿಸುವ ಶಕ್ತಿ ಭಜನೆಗಿದೆ. ಭಜನೆ ಭಕ್ತಿಮಾರ್ಗದ ಮುಖ್ಯ ಅಂಗ. ಭಜನೆ ಎಂದರೆ ಭಗವಂತನ ಸ್ತುತಿ ಎಂದರ್ಥ. ಕುಳಿತು ಏಕಾಗ್ರತೆಯಿಂದ ಭಗವನ್ನಾಮ ಸ್ಮರಣೆಯಲ್ಲಿ ಮೈಮರೆತರೆ, ಕುಣಿತ ಭಜನೆಯಲ್ಲಿ ಕುಣಿಯುತ್ತಾ ಹಾಡುತ್ತಾ ಮೈಮರೆಯುವುದು ಕೂಡಾ ಭಗವಂತನ ಸೇವೆಯೇ ಆಗಿದೆ. ಜಾನಪದ ಸೊಗಡಿನಿಂದ ಕೂಡಿರುವ ಈ ಭಜನೆ ಅಧ್ಯಾತ್ಮದ ಕೊಂಡಿಯಾಗಿದೆ. ಶ್ರೀಕೃಷ್ಣನ ಸನ್ನಿಧಾನದಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಜಾನಪದ ಪರಿಷತ್‌ನ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಭಿನಂದನಾರ್ಹರು. ಇದು ಇತರರಿಗೆ ಪ್ರೇರಣೆಯಾಗಬೇಕು” ಎಂದು ಅವರು ಪ್ರಶಂಸಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಮಾತನಾಡಿ, “ಜಾನಪದ, ಸಾಂಸ್ಕೃತಿಕ ಮತ್ತು ಅಧ್ಯಾತ್ಮ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ಸಂಸ್ಕೃತಿಯ ಹರಿಕಾರರಾಗಿದ್ದಾರೆ . ಶ್ರೀ ಮಧ್ವಾಚಾರ್ಯರು ಮತ್ತು ಶ್ರೀಪಾದ ರಾಯರ ಕಾಲದಲ್ಲಿ ಭಜನೆಯ ಸಂಸ್ಕೃತಿ ಉತ್ತುಂಗದಲ್ಲಿತ್ತು. ಮುಂದೆ ಶ್ರೀವ್ಯಾಸರಾಯರ ಕಾಲದಲ್ಲಿ ದಾಸ ಶ್ರೇಷ್ಟರಾದ ಪುರಂದರ ದಾಸ, ಕನಕ ದಾಸ ಮೊದಲಾದ ದಾಸ ಪರಂಪರೆ ಬೆಳೆದು ಬಂತು. ಮನೆಮನಗಳಲ್ಲಿ ಅವರ ಕೀರ್ತನೆಗಳು ಕಂಠಸ್ಯವಾದವು. ‘ಮಲಗಿ ಪರಮಾದರದಿ ಪಾಡಿದರೆ ಕುಳಿತು ಕೇಳುವ, ಕುಳಿತರೆ ನಿಲುವ, ನಿಂತರೆ ನಲಿವ, ನಲಿದರೆ ನಿಮಗೆ ಒಲಿವ’ ಎಂಬ ಭಗವಂತನ ನುಡಿಯನ್ನು ಕೇಳಿದಾಗ ಭಜನೆಯ ಶಕ್ತಿ, ಮಹತ್ವದ ಅರಿವಾಗುತ್ತದೆ. ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣ ಎಂದೆಲ್ಲಾ ಆಧುನಿಕ ಜಂಜಾಟದಲ್ಲಿ ಕಳೆದುಹೋಗುತ್ತಿರುವ ಮಾನವನಿಗೆ ಮಾನಸಿಕ ನೆಮ್ಮದಿ ಮತ್ತು ಅಧ್ಯಾತ್ಮಿಕ ಸಾಧನೆಗೆ ಭಜನೆ ರಹದಾರಿ” ಎಂದು ಅವರು ತಿಳಿಸಿದರು.
“ಭಜನೆ ಎಂಬುದು ಬರೀ ಭಗವಂತನ ನಾಮ ಸ್ಮರಣೆಯ ಕ್ರಿಯೆಯಲ್ಲ. ಇದು ಭಗವಂತನ ಅನುಗ್ರಹ ಮತ್ತು ಅವನಿಂದ ರಕ್ಷಣೆ ಪಡೆಯುವ ದಿವ್ಯ ಸಾಧನ. ವರ್ಷಗಳ ಹಿಂದೆ ಬೈಲೂರು ದೇವಳದಲ್ಲಿ ನಡೆಸಿದ ಭಜನಾ ಕಮ್ಮಟ ಮುಂದೆ ನಾಡಿನಾದ್ಯಂತ ಕುಣಿತ ಭಜನೆಗೆ ಪ್ರೇರಣೆಯಾಯಿತು. ಒಂದು ಕಾಲದಲ್ಲಿ ಮನೆಮನೆಗಳಲ್ಲಿ ನಡೆಯುತ್ತಿದ್ದ ಈ ಭಜನೆ ಇಂದು ಆಧುನಿಕತೆಯ ಹೆಸರಿನಲ್ಲಿ ಮಾಯವಾಗುತ್ತಿದೆ. ಮಕ್ಕಳು, ಯುವಕರೆಲ್ಲಾ ಮೊಬೈಲ್‌ನ ಆಕರ್ಷಣೆಗೆ ಒಳಗಾಗಿದ್ದಾರೆ. ಭಜನೆ ಒಂದೇ ಅವರನ್ನು ಮತ್ತೆ ಅಧ್ಯಾತ್ಮಿಕತೆ ಮತ್ತು ಸಂಸ್ಕಾರಕ್ಕೆ ಸೆಳೆಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಭಜನೆ, ಯಕ್ಷಗಾನದಂತಹ ಕಲೆಗಳಲ್ಲಿ ತೊಡಗಿಸಿಕೊಳ್ಳಲು ಹೆತ್ತವರು ಮುಂದಾಗಬೇಕು” ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕರೆ ನೀಡಿದರು.
ಸಂಗಮ ಜಾನಪದ ಕಲಾಮೇಳದ ನಿರ್ದೇಶಕರಾದ ಶ್ರೀ ರಮೇಶ ಕಲ್ಮಾಡಿಯವರು ಕುಣಿತ ಭಜನಾ ಸ್ಪರ್ಧೆಯ ಪೂರ್ಣ ವ್ಯವಸ್ಥೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯ ಭಜಕ ಶ್ರೀ ಗೋವಿಂದರಾಜ ಶೆಟ್ಟಿ ಬೈಲೂರು ಅವರನ್ನು ಸನ್ಮಾನಿಸಲಾಯಿತು. ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಸರ್ಜಿಕಲ್ ಆಂಡ್ ಹೆಲ್ತ್ ಕೇರ್ ಸರ್ವಿಸಸ್ ಉಡುಪಿ ಇದರ ಮುಖ್ಯಸ್ಥ ಶ್ರೀ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಉಭಯ ಜಿಲ್ಲೆಗಳ ಪ್ರಸಿದ್ಧ 15ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ತೀರ್ಪುಗಾರರಾಗಿ ಶಂಕರದಾಸ್ ಚೆಂಡ್ಕಳ, ನಾಗರಾಜ ನಾಯಕವಾಡಿ ಹಾಗೂ ಜಯಕರ ಪೂಜಾರಿ ಕುಂದಾಪುರ ಸಹಕರಿಸಿದರು. ಈ ಸ್ಪರ್ಧೆಯಲ್ಲಿ ತೆಂಕಮಿಜಾರಿನ ನೀರ್ಕೆರೆಯ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಪ್ರಥಮ ಬಹುಮಾನ, ಕಡಂದಲೆ, ಪಾಲಡ್ಕದ ಬ್ರಹ್ಮಶ್ರೀ ನಾರಾಯಣ ಗುರು ಭಜನ ಮಂಡಳಿ ದ್ವಿತೀಯ ಬಹುಮಾನ ಹಾಗೂ ಕಾರ್ಕಳದ ಸಾಣೂರಿನ ಶ್ರೀ ಆಂಜನೇಯ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದು ವಿಜೇತರಾಗಿದ್ದಾರೆ.
ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಪ್ರಶಾಂತ ಭಂಡಾರಿ ವಂದಿಸಿದರು.