ಕಾಸರಗೋಡು : ಪೆರಿಯ ಕೇಂದ್ರ ವಿಶ್ವವಿದ್ಯಾಲಯದ ಸಮೀಪವಿರುವ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 01 ಮೇ 2026ರಂದು ರಾಷ್ಟ್ರೀಯ ನೃತ್ಯೋತ್ಸವಕ್ಕೆ ಪದ್ಮವಿಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಉದ್ಘಾಟನೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರು ‘ಕೇಶಾದಿಪಾದಂ’ ಕೃತಿಗೆ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಗಾಯತ್ರಿ ಕಣ್ಣನ್ ಇವರ ಗಾಯನಕ್ಕೆ, ಮೃದಂಗದಲ್ಲಿ ಕುಳೂರು ಜಯಚಂದ್ರ ರಾವ್ ಹಾಗೂ ಕೊಳಲಿನಲ್ಲಿ ರವಿಚಂದ್ರ ರಾವ್ ಪಕ್ಕವಾದ್ಯ ಸಹಕಾರ ನೀಡಿದರು. ತದನಂತರ ಪ್ರಖ್ಯಾತ ಕಥಕ್ ನೃತ್ಯಗಾರ್ತಿ ನಿರುಪಮಾ ರಾಜೇಂದ್ರ ಅವರು ಕಥಕ್ ನೃತ್ಯವನ್ನು ಪ್ರಸ್ತುತಪಡಿಸಿದರು. ಖ್ಯಾತ ಲಯವಾದ್ಯಗಾರ ಡ್ರಮ್ಸ್ ಶಿವಮಣಿ ಹಾಗೂ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ಪ್ರೇಕ್ಷಕರ ಸಾಲಿನಲ್ಲಿ ಉಪಸ್ಥಿತರಿದ್ದು ಪ್ರದರ್ಶನವನ್ನು ಆಸ್ವಾದಿಸಿದರು.


ಉತ್ಸವದ ಭಾಗವಾಗಿ ಈಗಾಗಲೇ ಪ್ರಖ್ಯಾತ ಭರತನಾಟ್ಯ ನೃತ್ಯಗಾರ್ತಿ ಪ್ರಿಯದರ್ಶಿನಿ ಗೋವಿಂದ್, ಪದ್ಮಶ್ರೀ ಮೀನಾಕ್ಷಿ ಚಿತ್ತರಂಜನ್, ಚಲನಚಿತ್ರ ನಟಿಯರಾದ ಸಿಂಧು ಶ್ಯಾಮ್, ಕೃಷಾ ಕುರುಪ್, ಮುಂಬೈನ ಲತಾ ಸುರೇಂದ್ರನ್ ಮತ್ತು ತಂಡ ಹಾಗೂ ಪ್ರಿಯಾ ಮುರ್ಲೆ ಮತ್ತು ತಂಡ ಸೇರಿದಂತೆ ಸುಮಾರು ಎಂಟುನೂರು ಕಲಾವಿದರು ನೃತ್ಯ ಸಮರ್ಪಣೆ ಮಾಡಿದ್ದಾರೆ. ದಿನಾಂಕ 14 ಮೇ 2026ರವರೆಗೆ ನಡೆಯಲಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವವು ಪ್ರತಿದಿನ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಗೋಶಾಲೆಯ ‘ಧೇನು ಮಂಟಪ’ ಹಾಗೂ ‘ನಂದಿ ಮಂಟಪ’ ಎಂಬ ಎರಡು ವೇದಿಕೆಗಳಲ್ಲಿ ನಿರಂತರವಾಗಿ ಜರುಗಲಿದೆ. ಈ ನೃತ್ಯೋತ್ಸವದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕುಚಿಪುಡಿ, ಕಥಕ್ ಮತ್ತು ಕೇರಳ ನಟನಂ ಸೇರಿದಂತೆ ಭಾರತದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಅನಾವರಣಗೊಳ್ಳಲಿವೆ. 14 ದೇಶಗಳಿಂದ ಹಾಗೂ ಭಾರತದ 20 ರಾಜ್ಯಗಳಿಂದ ಸುಮಾರು 3,800ಕ್ಕೂ ಹೆಚ್ಚು ಕಲಾವಿದರು ಈ ವೈಶಾಖ ನಟನಂ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


