ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರ ಸ್ಮರಣಾರ್ಥ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಆಯೋಜಿಸಿದ ‘ಅಮೃತ ನಮನ’ ಕಾರ್ಯಕ್ರಮವು ದಿನಾಂಕ 15-01-2024ರಂದು ಕುತ್ತಾರಿನ ವೆಜಿನೇಷನ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಬದುಕಿನುದ್ದಕ್ಕೂ ಪ್ರೀತಿಯನ್ನೇ ಹಂಚಿ ಸರ್ವ ಸಮಾಜದ ಒಲುಮೆ ಗಳಿಸಿದ ಅಮೃತ ಸೋಮೇಶ್ವರರು ಶ್ರೇಷ್ಠ ಮಾನವತಾವಾದಿ. ಕನ್ನಡ, ತುಳು, ಮಲೆಯಾಳ ಭಾಷೆಗಳ ಅಂತಸ್ಸತ್ವವನ್ನರಿತು ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ ಅವರು ಸಾರಸ್ವತ ಲೋಕದ ಹಿರಿಯಣ್ಣನಂತೆ ಬದುಕಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಜೀವಮಾನ ಸಾಧನೆಗಾಗಿ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನಡೆಸಿದ ‘ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಸಂಭ್ರಮ – 2022’ ಕಾರ್ಯಕ್ರಮದಲ್ಲಿ ‘ಅಮೃತ ಸ್ವಾತಂತ್ರ್ಯ ಸಾಧನಾ ಪ್ರಶಸ್ತಿ’ ನೀಡಿದ ಧನ್ಯತೆ ಪ್ರತಿಷ್ಠಾನಕ್ಕಿದೆ. ನಾಡಿನ ಹಲವು ಬಗೆಯ ಮಾನ – ಸಮ್ಮಾನಗಳಿಗೆ ಪಾತ್ರರಾದ ಅಮೃತರಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಎಲ್ಲಾ ಪ್ರಶಸ್ತಿಗಳು ದೊರಕಿವೆ. ಆದರೆ ಅವರ ಲೇಖನಿಯ ಸಾಮರ್ಥ್ಯ ಮತ್ತು ಅಗಾಧವಾದ ಕವಿತಾ ಶಕ್ತಿಗೆ ‘ರಾಷ್ಟ್ರಕವಿ’ ಉಪಾಧಿ ಲಭಿಸಬೇಕಿತ್ತು.’ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ ರವೀಂದ್ರ ರೈ ಕಳ್ಳಿಮಾರು ಮಾತನಾಡಿ “ಉಳ್ಳಾಲ ಕಡಲ ಕಿನಾರೆಯ ಸೋಮನಾಥನ ಕ್ಷೇತ್ರವಾದ ಸೋಮೇಶ್ವರ ಎಂಬ ಊರು ಅಮೃತ ಸೋಮೇಶ್ವರರಿಂದಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಪ್ರಮಾಣದ ಹೆಸರು ಪಡೆಯಿತು. ಅಮೃತರು ತಾವು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಿದ ಹೃದಯವಂತ ವಿದ್ವಾಂಸರು” ಎಂದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಅವರು ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವದ ಆರಂಭಕಾಲದಿಂದಲೂ ಅಮೃತರು ನೀಡಿದ ಸಲಹೆ ಹಾಗೂ ಸಹಕಾರಗಳನ್ನು ಸ್ಮರಿಸಿಕೊಂಡರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲ್ ಪ್ರಾರ್ಥಿಸಿ ವಂದಿಸಿದರು. ಸಮಿತಿ ಪದಾಧಿಕಾರಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ದೀಪಕ್ ರಾಜ್ ಉಳ್ಳಾಲ್, ಹರೀಶ್ ಮಾಸ್ಟರ್, ಸುವಾಸಿನಿ ಬಬ್ಬುಕಟ್ಟೆ, ವಿನುತಾ ಉಪಸ್ಥಿತರಿದ್ದರು. ಅಮೃತ ಸೋಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.