ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’. ಇದರ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 04-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಉಡುಪಿಯ ವಿದುಷಿ ಶೀತಲ್ ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀಮತಿ ಗೀತಾಂಜಲಿ ಇವರ ಸುಪುತ್ರಿಯಾಗಿರುವ ಡಾ. ಶೀತಲ್ ಉಡುಪಿಯ ಎಸ್. ಡಿ. ಎಂ. ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಕೇರಳದ ಕೊಲ್ಲಂನಲ್ಲಿರುವ ‘ಅಮೃತ ಸ್ಕೂಲ್ ಆಫ್ ಆಯುರ್ವೇದ’ ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಳೆದ ಸುಮಾರು 12 ವರ್ಷಗಳಿಂದ ಭರತನಾಟ್ಯವನ್ನು ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಭರತನಾಟ್ಯದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪೂರ್ತಿಗೊಳಿಸಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಚೇತನಾ ಆಚಾರ್ಯ ಇವರಲ್ಲಿ ಕಲಿತಿದ್ದು, ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ನೃತ್ಯ ನಿಕೇತನ ಕೊಡವೂರಿನ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಹಾಗೂ ನೃತ್ಯ ನಾಟಕಗಳಲ್ಲಿ ಭಾಗವಹಿಸಿರುತ್ತಾರೆ.