ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕ ಮತ್ತು ಕಾರ್ಕಳದ ಕುಂದಾಪ್ರದವರು ಆಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯು ದಿನಾಂಕ 5 ಆಗಸ್ಟ್ 2024ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ “ಭಾಷಿಯಲ್ಲ ಬದ್ಕ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಖ್ಯಾತ ಕುಂದಾಪ್ರ ಕನ್ನಡದ ವಾಗ್ಮಿ ಮನುಹಂದಾಡಿಯವರು “ಕುಂದಾಪ್ರ ಕನ್ನಡವೆನ್ನುವುದು ಕೇವಲ ಒಂದು ಭಾಷಾ ಪ್ರಭೇದ ಮಾತ್ರ ಅಲ್ಲ ಅದೊಂದು ಸುಂದರವಾದ ಸಂಸ್ಕೃತಿ, ವೈವಿಧ್ಯಮಯವಾದ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಕುಂದಾಪುರದವರು ಪ್ರತಿನಿತ್ಯ ಕೈಮುಗಿಯುವ ದೈವ ದೇವರುಗಳ ಮೂರ್ತಿ ಸಿದ್ಧವಾಗಿರುವುದು ಕಾರ್ಕಳದ ನೆಲ್ಲಿಕಾರಿನ ಕಲ್ಲಿನಿಂದ ಹಾಗಾಗಿ ಕುಂದಾಪ್ರ ಮತ್ತು ಕಾರ್ಕಳದ ನಡುವೆ ಅವಿನಾಭಾವ ಸಂಬಂಧವಿದೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಷ್ಟು ಪ್ರಚಾರ ಹಾಗೂ ಪ್ರಸಿದ್ಧಿ ಪಡೆಯುವಲ್ಲಿ ಮಾಧ್ಯಮದ ಪಾತ್ರ ಬಹಳ ಇದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಇದರ ರಾಜ್ಯಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು “ಕಾರ್ಕಳ ವಿಶೇಷ ಸಂಸ್ಕೃತಿ ಸಂಸ್ಕಾರವನ್ನು ಹೊಂದಿರುವ ಎಲ್ಲರನ್ನು ಪ್ರೀತಿಸುವ ಪ್ರೋತ್ಸಾಹಿಸುವ ಊರು. ವೈಶಿಷ್ಟ್ಯ ಪೂರ್ಣವಾದ ಕುಂದಾಪ್ರ ಕನ್ನಡದ ದಿನಾಚರಣೆಯಿಂದ ಕಾರ್ಕಳ ಮತ್ತು ಕುಂದಾಪ್ರದ ನಡುವೆ ಮಧುರ ಬಾಂಧವ್ಯವನ್ನು ಬೆಸೆಯುವಂತಾಗಲಿ” ಎಂದರು. ಮುಖ್ಯ ಅತಿಥಿಯಾಗಿದ್ದ ಮೂಡಬಿದ್ರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಬೈಂದೂರು ಅವರು “ಭಾಷಾಭಿಮಾನದೊಂದಿಗೆ ಪ್ರಕೃತಿ ಪ್ರೇಮವನ್ನು ಬೆಳೆಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಹಿಸಿದ್ದರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಆಶಯ ಭಾಷಣದಲ್ಲಿ ಕುಂದಾಪ್ರ ಕನ್ನಡದ ವೈಶಿಷ್ಟ್ಯವನ್ನು ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾದ ಮನು ಹಂದಾಡಿಯವರನ್ನು ಹಾಗೂ ಮಾಡಬಿದ್ರೆ ವಲಯಕ್ಕೆ ಹೊಸದಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಂದ ಶ್ರೀಧರ ಪಿ. ಬೈಂದೂರು ಇವರನ್ನು ಕಾರ್ಕಳ – ಕುಂದಾಪ್ರ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷರಾದ ನಿತ್ಯಾನಂದ ಎಸ್. ಪೈ ಉಪಸ್ಥಿತರಿದ್ದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ರಾಜಾರಾಮ್ ಸೆರ್ವೇಗಾರ್ ವಂದಿಸಿ, ಶಿಕ್ಷಕಿ ಗೀತಾ ನಿರೂಪಿಸಿದರು.