ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ‘ವಿವೇಕವಾಣಿ’ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೆರಡನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 13-02-2024ರಂದು ಮಂಗಳೂರಿನ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ನಾಯಕತ್ವ ಮತ್ತು ನಿರ್ವಹಣೆಯ ಪಾಠಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಬೆಂಗಳೂರಿನ ವಿವೇಕಾನಂದ ಯೂತ್ ಮೂವ್ಮೆಂಟ್ ಇದರ ಸಿ. ಇ. ಓ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಶ್ರೀ ಸಂದೀಪ್ ವಸಿಷ್ಠ “ಸ್ವಾಮಿ ವಿವೇಕಾನಂದರ ತತ್ವಗಳಾದ ಸೇವೆ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಯಿ ಭಾರತಿಯ ಪೂಜೆಯನ್ನು ಮಾಡುತ್ತಾ ದೀನರ, ದಲಿತರ ಮತ್ತು ದುಃಖಿಗಳ ಸಮಸ್ಯೆಗಳನ್ನು ಅರಿತುಕೊಳ್ಳುವವರಾಗಬೇಕು. ನಮ್ಮ ಗುರಿಗಳು ಯಾವಾಗಲೂ ಅತೀ ಎತ್ತರದಲ್ಲಿರಬೇಕು ಹಾಗೆ ಆ ಗುರಿಯನ್ನು ತಲುಪುವಲ್ಲಿ ತಾಳ್ಮೆಯಿಂದ ಪರಿಶ್ರಮಿಸಬೇಕು. ನೇತೃತ್ವವನ್ನು ವಹಿಸಿಕೊಳ್ಳುವುದು ಒಂದು ಒಳ್ಳೆಯ ನಾಯಕತ್ವದ ಗುಣ ಮತ್ತು ಸರಿಯಾದ ರೀತಿಯಲ್ಲಿ ಆಯೋಜನೆ ಮಾಡುವುದೇ ನಿರ್ವಹಣೆ.” ಎಂದು ಹೇಳಿದರು.
ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ನಿರ್ದೇಶಕರಾಗಿರುವ ಡಾ. ಟಿ. ಜಯಪ್ರಕಾಶ್ ರಾವ್ ಮಾತನಾಡಿ “ಯುವಜನರ ಏಕಾಗ್ರತೆಯು ಕಡಿಮೆಯಾಗುತ್ತಿದೆ. ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಏಕಾಗ್ರತೆಯು ಅತೀ ಮುಖ್ಯ. ಆಧುನಿಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿವೆ. ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಮಕೃಷ್ಣ ಮಠಕ್ಕೆ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಧನ್ಯವಾದಗಳು.” ಎಂದು ಹೇಳಿದರು.
ರಾಮಕೃಷ್ಣ ಮಠ ಮತ್ತು ಮಿಷನ್ನಿನ ಕಾರ್ಯ ಚಟುವಟಿಕೆಗಳ ಬಗ್ಗೆ ರಾಮಕೃಷ್ಣ ಮಿಷನ್ ಇದರ ಕಾರ್ಯಕ್ರಮ ಸಂಯೋಜಕರಾಗಿರುವ ಶ್ರೀ ರಂಜನ್ ಬೆಳ್ಳಾರ್ಪಾಡಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧರಾದ ಶ್ರೀ ಬೆಳ್ಳಾಲ ಗೋಪಿನಾಥ ರಾವ್, ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಲ್ಲಿಯ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಭಾಗವಹಿಸಿದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಆಶಿತ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ, ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇದರ ಪ್ರಾಧ್ಯಾಪಕಿಯಾದ ಕುಮಾರಿ ದೀಕ್ಷಾ ರಾವ್ ವಂದಿಸಿದರು.