10 ಫೆಬ್ರವರಿ 2023: ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆ ನಡೆದುಕೊಳ್ಳುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಎಂಥವರನ್ನೂ, ಗಂಡಾಗಿ ಹುಟ್ಟಿ ಹೆಣ್ಣಿನ ರೂಪದಲ್ಲಿ ಆಕರ್ಷಿಸಬಲ್ಲ ತಾಕತ್ತಿರುವುದು ಯಕ್ಷಗಾನ ಕಲಾವಿದರಿಗೆ ಮಾತ್ರ. ಈ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಕಲಾವಿದ ರಾಜೇಶ್ ನಿಟ್ಟೆ.
10.02.1992 ರಂದು ಸಂಜೀವ ಕೊಟ್ಟಾರಿ ಹಾಗೂ ಬೇಬಿ ಇವರ ಮಗನಾಗಿ ಜನನ. ಚಿಕ್ಕಂದಿನಿಂದಲೂ ಯಕ್ಷಗಾನ ಕಲೆಯ ಮೇಲೆ ಇದ್ದ ಆಸಕ್ತಿ; ಶಶಿಕಾಂತ್ ಶೆಟ್ಟಿ ಅವರ ಪಾತ್ರಗಳು; ನೀಲ್ಕೋಡು ಶಂಕರ ಹೆಗಡೆ ಅವರ ನಾಗವಲ್ಲಿ ಪಾತ್ರ ನೋಡಿ ಇದರಿಂದ ಪ್ರೇರಣೆಗೊಂಡು ಸ್ತ್ರೀವೇಷ ಮಾಡಬೇಕೆಂಬ ಆಸೆ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದರು. ನಿಟ್ಟೆ ಅವರ ಪ್ರಥಮ ಯಕ್ಷಗಾನ ಗುರುಗಳು ಕೆರ್ವಾಷೆ ಆನಂದ ಗುಡಿಗಾರ. ನಂತರ ಕೃಷ್ಣಪ್ಪ ಮೂಲ್ಯ ಕಟೀಲ್, ವಿಶ್ವರೂಪ ಮಧ್ಯಸ್ಥ ನೀಲಾವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಹಿಂದೆ ಆದ ಯಕ್ಷಗಾನ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಅಥವಾ ಎಂ.ಕೆ ರಮೇಶ್ ಆಚಾರ್ಯ ಇವರ ಹತ್ತಿರ ಕೇಳಿ ಹಾಗೂ ಸಹ ಕಲಾವಿದರ ಮಾರ್ಗದರ್ಶನದಿಂದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ನಿಟ್ಟೆ ಹೇಳುತ್ತಾರೆ.
ದೇವಿ ಮಹಾತ್ಮೆ, ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ಮಾನಿಷಾದ ಇವರ ನೆಚ್ಚಿನ ಪ್ರಸಂಗಗಳು.
ಮಾಲಿನಿ, ಸತ್ಯಭಾಮೆ, ಸೈರಿಣಿ, ರತಿ, ಕಯಾದು, ಸೀತೆ ನೆಚ್ಚಿನ ವೇಷಗಳು.
ಯಕ್ಷಗಾನ ರಂಗದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ:
ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಪಡೆದುಕೊಂಡು ಮುಂದೆ ಹೋಗುತ್ತಿದೆ.
ಕಲಾವಿದರಿಗೆ ಎಲ್ಲಾ ಪ್ರೇಕ್ಷಕರು, ಅಭಿಮಾನಿಗಳು ದೇವರಿಗೆ ಸಮಾನ. ಯಾರು ಏನು ಹೇಳಿದರು ಕೂಡ ಅದನ್ನ ಒಳಿತಿಗೆ ಎಂದು ಪ್ರೀತಿಯಿಂದ ಸ್ವೀಕರಿಸಿ, ಯಕ್ಷಗಾನವನ್ನು ಆಸ್ವಾದಿಸುವವರು ಇರುವ ಕಾರಣ ನಮ್ಮಂಥ ಕಲಾವಿದರು ಬೆಳೆಯಲು ಸಾಧ್ಯವಾದದ್ದು ಹಾಗಾಗಿ ಎಲ್ಲರೂ ಕೂಡ ಉತ್ತಮ ಪ್ರೇಕ್ಷಕರೇ ಹೌದು.
ಬಪ್ಪನಾಡು, ಕಟೀಲು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಪುಸ್ತಕ ಓದುವುದು ಹಾಗೂ ಯಕ್ಷಗಾನ ವೀಡಿಯೋ ನೋಡುವುದು ಇವರ ಹವ್ಯಾಸ.
ಬ್ರಹ್ಮಾವರದಲ್ಲಿ ವಿಶ್ವರೂಪ ಮಧ್ಯಸ್ಥ ನೀಲಾವರ ಅವರ ಕಾರ್ಯಕ್ರಮದಲ್ಲಿ ಯಕ್ಷ ಕಲಾ ಸುಂದರಿ ಎಂಬ ಬಿರುದು, ಪಾವಂಜೆ ಮೇಳದಲ್ಲಿ ಕೂಡ 4 ರಿಂದ 5 ಸನ್ಮಾನ ಹೀಗೆ ನನ್ನನ್ನು ಗುರುತಿಸಿದವರಿಗೆ ನಾನು ಸದಾ ಚಿರಋಣಿ ಎಂದು ನಿಟ್ಟೆ ಹೇಳುತ್ತಾರೆ.
ಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಕಲಾಭಿಮಾನಿಗಳೆಲ್ಲರ ಹಾರೈಕೆ.
Photos Courtesy:- Guru Majalko, Subramanya Hebbar, Arun Studio & Videos.
- ಶ್ರವಣ್ ಕಾರಂತ್ ಕೆ., ಮಂಗಳೂರು.