ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಏಳನೇ ವರ್ಷದ ‘ಯಕ್ಷ ವೈಭವ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 4-00 ಗಂಟೆಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಮತ್ತು ಯಕ್ಷ ವೈಭವಗಳು ನಡೆಯಲಿದೆ.
ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಶ್ರೀ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರಿಗೆ ‘ಭ್ರಾಮರೀ ಯಕ್ಷ ಮಣಿ ಪ್ರಶಸ್ತಿ’ ಹಾಗೂ ಅಪೂರ್ವ ಯಕ್ಷ ಛಾಯಾಚಿತ್ರಗಳ ಸಂಗ್ರಹಕರಾದ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ.) ಕೈರಂಗಳ ಇವರಿಗೆ ‘ಭ್ರಾಮರೀ ಯಕ್ಷ ಸೇವಾ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಸಂಜೆ 4-00 ಗಂಟೆಗೆ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಸಂಗ್ರಹದ ಅಪೂರ್ವ ಯಕ್ಷ ಛಾಯಾಚಿತ್ರಗಳ ಪ್ರದರ್ಶನ ಮತ್ತು ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಪಂಚವಟಿ’, ‘ಕಂಸ ವಿವಾಹ’ ಸುಧನ್ವ ಮೋಕ್ಷ’ ಹಾಗೂ ಮಹಿರಾವಣ ಕಾಳಗ’ ಎಂಬ ಪರಸಂಗದ ಯಕ್ಷಗಾನ ಪ್ರದರ್ಶನಗಳು ನಡೆಯಲಿದೆ.