ಕಾಸರಗೋಡು : ಯಕ್ಷಗಾನ ಎಂಬ ಶ್ರೇಷ್ಠಕಲೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಶ್ರೀಸ್ಕಂದ ಯಕ್ಷಗಾನ ಕೇಂದ್ರ, ಪಾಯಿಚ್ಚಾಲು ಎಂಬ ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕಾಸರಗೋಡು ಚಿನ್ನಾರವರು ಅಭಿಪ್ರಾಯಪಟ್ಟರು. ಯಕ್ಷಗಾನವು ನಾಟ್ಯ, ಅಭಿನಯ, ಮುದ್ರೆ, ಮಾತುಗಾರಿಕೆ ಇವೆಲ್ಲವನ್ನೂ ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಭಾರತೀಯ ಯಾವುದೇ ಕಲಾಪ್ರಕಾರಗಳಲ್ಲಿ ಹೀಗೆ ಕಾಣುವುದಕ್ಕೆ ಸಾಧ್ಯವಿಲ್ಲ ಹಾಗಾಗಿಯೇ ಯಕ್ಷಗಾನವು ಈಗಲೂ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು, ಅವರು ದಿನಾಂಕ 20 ಅಕ್ಟೋಬರ್ 2024 ರಂದು ಸ್ಕಂದ ಯಕ್ಷಗಾನಕೇಂದ್ರದ ರಂಗಪ್ರವೇಶ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯರು, ಕ್ಷೇತ್ರಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ಕ್ಷೇತ್ರದ ಪಾತ್ರಹಿರಿದು. ಅದನ್ನು ಪೂರೈಸುವಲ್ಲಿ ಶ್ರೀಸ್ಕಂದ ಯಕ್ಷಗಾನ ಕೇಂದ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕೂಡ್ಲು ಯಕ್ಷಗಾನದ ತವರು. ಆ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಯಕ್ಷಗಾನ ಕೇಂದ್ರಗಳು ಅನಿವಾರ್ಯ ಮಾತ್ರವಲ್ಲ ಮಕ್ಕಳಿಗೆ ಪುರಾಣಗಳ ಅರಿವೂ ಸಾಧ್ಯ ಎಂದು ಕೇಂದ್ರದ ಲಾಂಛನವನ್ನು ಬಿಡುಗಡೆ ಮಾಡಿ ಶ್ರೀಗೋಪಾಲಕೃಷ್ಣ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಕೆ. ಜಿ. ಶಾನುಭೋಗ್ ಮಾತನಾಡಿದರು. ಶೇಷವನ ಕ್ಷೇತ್ರದ ಆಡಳಿತ ಮೊಕ್ತೇಸರ ವೇಣುಗೋಪಾಲ, ಅನುವಂಶಿಕ ಮೊಕ್ತೇಸರ ಸದಾಶಿವ, ಕೂಡ್ಲು ಮೇಳದ ವ್ಯವಸ್ಥಾಪಕರಾದ ರವಿರಾಜ ಅಡಿಗ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ವಹಿಸಿದರು. ಈ ಸಂದರ್ಭದಲ್ಲಿ ನಾಟ್ಯಗುರುಗಳಾದ ರಂಜಿತ್ ಗೋಳಿಯಡ್ಕ ಇವರಿಗೆ ಶಾಲು, ಹಾರ, ಸ್ಮರಣಿಕೆ ಹಾಗೂ ಫಲಪುಷ್ಪನೀಡಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಪ್ರಮೀಳಾರ್ಜುನ-ಷಣ್ಮಖ ವಿಜಯ ಎಂಬ ಯಕ್ಷಗಾನ ನಡೆಯಿತು ಹಿಮ್ಮೇಳದಲಿ ಭಾಗವತರಾಗಿ ತಲ್ಪನಜೆ ವೆಂಕಟ್ರಮಣ ಭಟ್, ರಾಮಪ್ರಸಾದ್ ಮಯ್ಯ, ಚೆಂಡೆ ಮದ್ದಳೆಯಲ್ಲಿ ಹರೀಶ್ ಅಡೂರು, ರಿತೇಶ್ ಅಡ್ಕ, ವಿಕ್ರಂ ಮಯ್ಯ, ಚಕ್ರತಾಳದಲ್ಲಿ ಅರ್ಪಿತ್ ಕೂಡ್ಲು ಸಹಕರಿಸಿದರು.