ಉಡುಪಿ : ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ತಿಮ್ಮಣ್ಣ ಭಟ್ (63) ಬುಧವಾರ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ವೃದ್ಧ ತಂದೆ, ತಾಯಿ, ಪತ್ನಿ, ದತ್ತುಪುತ್ರ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಆಗಲಿದ್ದಾರೆ.
ಮೂಲತಃ ಶಿರಸಿ ತಾಲೂಕಿನ ಥಂಡಿಮನೆಯವರಾದ ಇವರು ಯಕ್ಷಗಾನ ವಲಯದಲ್ಲಿ ಥಂಡಿಮನೆ ಎಂದೇ ಪ್ರಸಿದ್ಧರಾಗಿದ್ದರು. ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 20ರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದ್ದರು. ಸ್ವತಃ ಕಲಾವಿದರಾಗಿದ್ದ ತಂದೆ ತಿಮ್ಮಣ್ಣ ಭಟ್ಟರ ಪ್ರೋತ್ಸಾಹವೂ ಇತ್ತು. ಎರಡನೆಯ ವೇಷಕ್ಕೆ ಬೇಕಾದ ಸ್ವರಭಾರ, ಆಳಂಗ, ರಂಗ ನಿರ್ವಹಣಾ ಕ್ರಮದಿಂದ ಸಮರ್ಥ ಕಲಾವಿದರೆಂದು ಖ್ಯಾತರಾಗಿದ್ದರು. ಕಂಚಿನ ಕಂಠದೊಡನೆ ಅತ್ಯುತ್ತಮ ವೇಷಗಾರಿಕೆ, ನಿಲುವು, ಅಭಿನಯ, ಅದ್ಭುತ ಪಾತ್ರಚಿತ್ರಣ ಹಾಗೂ ನೃತ್ಯಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದರು. ಶಿರಸಿ ಪಂಚಲಿಂಗ, ಶಿರಸಿ ಮಾರಿಕಾಂಬ, ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ ಹಾಗೂ ಕೊನೆಯ ಕೆಲವು ವರ್ಷ ಪೆರ್ಡೂರು ಮೇಳದಲ್ಲಿ ಎರಡನೆಯ ವೇಷಧಾರಿಯಾಗಿ ಒಟ್ಟು ನಾಲ್ಕು ದಶಕಗಳ ಕಾಲ ಕಲಾಸೇವೆ ಮಾಡಿದರು. ರಾವಣ, ಭೀಮ, ಘಟೋದ್ಗಜ, ಕಂಸ, ಕೌರವ, ಆಂಜನೇಯ, ದಕ್ಷ, ಈಶ್ವರ, ದಶರಥ, ಸಾಲ್ವ, ಭೀಷ್ಮ ಕಾರ್ತವೀರ್ಯ, ಯಮ, ಮಾಗಧ, ಶುಕ್ರಾಚಾರ್ಯ, ಯಯಾತಿ, ವೀರಮಣಿ, ದುಷ್ಟಬುದ್ದಿ, ರಕ್ತಜಂಘ, ವಲಲ, ಕಂಸ ಹೀಗೆ ಹಲವು ಪೌರಾಣಿಕ ಪಾತ್ರಗಳು ಕಲಾರಸಿಕರ ಮೆಚ್ಚುಗೆ ಗಳಿಸಿದ್ದವು. ಯಕ್ಷಗಾನ ಕಲಾರಂಗ ಸಂಸ್ಥೆ ಎರಡು ವರ್ಷದ ಹಿಂದೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.

