ಮಂಗಳೂರು : ‘ಸರಯೂ ಬಾಲ ಯಕ್ಷ ವೃಂದ’ ಇವರ ವತಿಯಿಂದ ದಿನಾಂಕ 08 ಆಗಸ್ಟ್ 2026ರಂದು ಕೋಡಿಕಲ್ ನ ಸರಯೂ ಸಭಾಭವನದಲ್ಲಿ ಆಟಿಯ ಆಟ ಕೂಟದ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಕತ್ವದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾಡಿನಾಡಿದ ವೇದಮೂರ್ತಿ ವಿಶ್ವಕುಮಾರ ಜೋಯಿಸರು “ಕಲೆ ಎನ್ನುವುದು ಪ್ರತಿಯೋರ್ವನ ಬದುಕಿನಲ್ಲೂ ಪಾತ್ರವಹಿಸುತ್ತದೆ. ತನ್ನೊಳಗಿನ ಅಭಿವ್ಯಕ್ತಿಯನ್ನು ಪ್ರಕಟಗೊಳಿಸಲು ಅವನಲ್ಲಿ ಅಡಕವಾಗಿರುವ ನೈಪುಣ್ಯತೆ ಸಹಕರಿಸುತ್ತದೆ. ಶಾಸ್ತ್ರದಲ್ಲೇ ಇದು ಉಲ್ಲೇಖವಾಗಿದೆ. ಹಾಗಾಗಿ, ಅದು ಶಾಸ್ತ್ರೀಯವೇ ಆದರೆ ಅದಕ್ಕೆ ಅಳಿವಿಲ್ಲ. ಅವಿನಾಶಿಯಾಗಿರುವ ಕಲೆಗಳು ನಮ್ಮನ್ನು ಸಮಾಜಕ್ಕೆ ಪರಿಚಯಿಸುತ್ತದೆ. ಕಲೆಗಳಿಗೆ ಸಾರ್ವಭೌಮತ್ವ ಇದೆ. ನಮ್ಮ ಜೀವನದಲ್ಲಿ ಪ್ರಮುಖ ಅಂಗವಾಗಿರುವ ಯಕ್ಷಗಾನಕ್ಕೆ ನಮ್ಮೆಲ್ಲರ ಬೆಂಬಲವಿರಲಿ” ಎ೦ದು ಹೇಳಿದರು.
ಬಂಗ್ರಕೂಳೂರಿನ ನಿಕಟಪೂರ್ವ ಮ.ನ.ಪಾ. ಸದಸ್ಯ ಶ್ರೀ ಕಿರಣ್ ಕುಮಾರ್ ಕೋಡಿಕಲ್ ಶುಭಹಾರೈಸಿದರು. ಹಿರಿಯರಾದ ಕೊಂಚಾಡಿ ರಾಮಚಂದ್ರ ಭಟ್, ಶ್ರೀ ಗಣೇಶ್ ಮಯ್ಯ, ಶ್ರೀಮತಿ ಜಯಶ್ರೀ ಎಂ, ಸುಹಾಸ್ ರಾವ್ ಅತಿಥಿಗಳಾಗಿದ್ದರು. ಯಕ್ಷ ಗುರು ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ದೀಪಕ್ ಶರ್ಮಾ ವಂದಿಸಿದರು. ಬಳಿಕ ಅಶೋಕ್ ಬಿ.ಎನ್., ವರ್ಕಾಡಿ ಗಣೇಶ್ ಮಯ್ಯ, ವರ್ಕಾಡಿ ಮಧುಸೂದನ ಅಲೆವೂರಾಯ, ಗೌರವ್ ರಾವ್ ಇವರ ಸಹಯೋಗದೊಂದಿಗೆ ‘ಮಂಡೋದರಿ ಪರಿಣಯ’ ಎಂಬ ಯಕ್ಷಗಾನ ಬಯಲಾಟ ನಡೆಯಿತು.



