ಬಂಟ್ವಾಳ : ಯಕ್ಷಗಾನದ ಹಿರಿಯ ಸಂಘಟಕ ದಿ. ಬೋಳೂರು ದೋಗ್ರ ಪೂಜಾರಿಯವರ ಮಗ, ಖ್ಯಾತ ಸಾಹಿತಿ ದಿ. ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರ ಬೋಳೂರು ಮಧು ಕುಮಾರ್ (86) ಇವರು ದಿನಾಂಕ 08 ಆಗಸ್ಟ್ 2026ರಂದು ಸಂಜೆ ಬಂಟ್ವಾಳ ನರಿಕೊಂಬಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮಧುಕುಮಾರ್ ಅವರು ತುಳು, ಕನ್ನಡ ಪ್ರಸಂಗಕರ್ತರಾಗಿ ಜನಪ್ರಿಯತೆ ಗಳಸಿದವರು. ಅವರು ರಚಿಸಿದ ‘ಸುದರ್ಶನ ವಿಜಯ’ ಪ್ರಸಂಗವು ಕಳೆದ ಐದು ದಶಕಗಳಿಂದ ವೃತ್ತಿ ಮೇಳ ಹಾಗೂ ಹವ್ಯಾಸಿ ವಲಯದಲ್ಲಿ ಪ್ರಸಿದ್ದಿ ಪಡೆದಿದೆ. ಕಡುಗಲಿ ಕುಮಾರ ರಾಮ, ಏಕಾದಶಿ ದೇವಿ ಮಹಾತ್ಮೇ, ಬಾಲೆ ನಾಗಮ್ಮ, ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ, ತುಳು ಕೋಟಿ ಚೆನ್ನಯ ಪ್ರಸಂಗಗಳು ನಿತ್ಯ ನೂತನ ಪ್ರಸಂಗಗಳಾಗಿವೆ. ಅವರು ಭಾಗವತರಾಗಿಯೂ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಯಕ್ಷಗಾನ ವೇಷ ಭೂಷಣ ವ್ಯವಸ್ಥೆಯನ್ನೂ ಹೊಂದಿದ್ದರು. ಯಕ್ಷಗಾನ ಕಲಾರಂಗ ಇವರ ಕಲಾಸಾಧನೆ ಗಮನಿಸಿ 2017ರಲ್ಲಿ ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಿದೆ.
