ಮಂಗಳೂರು : ಸಂಗೀತ ಪರಿಷತ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಮಠದ ಸಹಯೋಗದಲ್ಲಿ ‘ಯುವ ಸಂಗೀತೋತ್ಸವ 2024’ ಕಾರ್ಯಕ್ರಮವು ದಿನಾಂಕ 05-05-2024ರ ರವಿವಾರದಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಿತು.
ಖ್ಯಾತ ಯುವ ಗಾಯಕಿ ಸೂರ್ಯ ಗಾಯತ್ರಿ ಅವರ ಹಾಡುಗಾರಿಕೆ ಸಂಗೀತೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ಶಾಸ್ತ್ರೀಯವಾದ ಹಲವು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸುಮಾರು ಮೂರು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೆರವೇರಿತು. ಸೂರ್ಯ ಗಾಯತ್ರಿಯ ಅಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳು ಸಂಗೀತ ಆಸ್ವಾದಿಸಿದರು.
ಸೂರ್ಯ ಗಾಯತ್ರಿ ಅವರಿಗೆ ವಯಲಿನ್ ನಲ್ಲಿ ಗಣರಾಜ ಕಾರ್ಲೆ, ಮೃದಂಗದಲ್ಲಿ ಅನಿಲ್ ಕುಮಾರ್ ವಡಗರ ಮತ್ತು ಘಟಂ ನಲ್ಲಿ ಮಂಜೂರ್ ಉಣ್ಣಿಕೃಷ್ಣನ್ ಸಾಥ್ ನೀಡಿದರು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಚಿನ್ಮಯಿ ವಿ. ಭಟ್ ಅವರಿಂದ ನಡೆದ ಹಾಡುಗಾರಿಕೆಗೆ ವಯಲಿನ್‌ನಲ್ಲಿ ಗೌತಮ್ ಭಟ್ ಪಿ.ಜಿ., ಮೃದಂಗದಲ್ಲಿ ಅವಿನಾಶ್ ಬೆಳ್ಳಾರೆ ಸಹಕರಿಸಿದರು. ಬಳಿಕ ವೆಂಕಟ ಯಶಸ್ವಿ ಮತ್ತು ವಿಜೇತಾ ಸುಬ್ರಹ್ಮಣ್ಯ ಇವರಿಂದ ನಡೆದ ಹಾಡುಗಾರಿಕೆಗೆ ವಯಲಿನ್‌ನಲ್ಲಿ ಧನಶ್ರೀ ಶಬರಾಯ ಮತ್ತು ಮೃದಂಗದಲ್ಲಿ ಪ್ರಣವ್ ಸುಬ್ರಹ್ಮಣ್ಯ ಸಹಕರಿಸಿದರು.
ಅಪರಾಹ್ನ ಮೇಧಾ ಉಡುಪ ಅವರಿಂದ ಪ್ರಸ್ತುತಗೊಂಡ ಕೊಳಲು ವಾದನಕ್ಕೆ ವಯಲಿನ್‌ನಲ್ಲಿ ಗೌತಮ್ ಭಟ್ ಪಿ.ಜಿ. ಹಾಗೂ ಮೃದಂಗದಲ್ಲಿ ಅವಿನಾಶ್ ಬೆಳ್ಳಾರೆ ಸಹಕರಿಸಿದರು. ಬಳಿಕ ತನ್ಮಯಿ ಹಸನಡ್ಕ ಅವರಿಂದ ನಡೆದ ಹಾಡುಗಾರಿಕೆಗೆ ವಯಲಿನ್‌ನಲ್ಲಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಪ್ರಣವ್ ಸುಬ್ರಹ್ಮಣ್ಯ ಸಹಕರಿಸಿದರು.