ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವಿನೂತನ ಕಾರ್ಯಕ್ರಮ ‘ಮನೆಯೇ ಗ್ರಂಥಾಲಯ’ ಕಾರ್ಯಕ್ರಮದ 50ನೇ ಗ್ರಂಥಾಲಯ ದಿನಾಂಕ 15-07-2024ರಂದು ಸಂಜೆ 5-55 ಗಂಟೆಗೆ ಉಡುಪಿಯ ಸಿಟಿ ಬಸ್ ಸ್ಟಾಂಡ್ ಹತ್ತಿರವಿರುವ ಗಾಂಧಿ ಆಸ್ಪತ್ರೆಯಲ್ಲಿ ಕನ್ನಡದ ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು ಪುಸ್ತಕ ನೀಡುವ ಮೂಲಕ ಉದ್ಘಾಟಿಸಲಿದ್ದಾರೆ. ಡಾ. ರಾಜಲಕ್ಷ್ಮೀ, ಡಾ. ಆಮ್ನಾ ಹೆಗ್ಡೆ, ಡಾ. ಹರಿಶ್ಚಂದ್ರ, ಡಾ. ವ್ಯಾಸರಾಜ ತಂತ್ರಿ ಉಪಸ್ಥಿತರಿರುವರು.
ಉಡುಪಿಯ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರೀಶ್ಚಂದ್ರ ಅವರು ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತ ಬಂದಿದ್ದಾರೆ. ಈಗ ನಮ್ಮ ಮಹತ್ವದ ಯೋಜನೆಯಾದ ‘ಮನೆಯೇ ಗ್ರಂಥಾಲಯ’ ಇದರ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ.
ಆಸ್ಪತ್ರೆಯ ಮೊದಲನೆಯ ಮಹಡಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ಪ್ರಾರಂಭಿಸಲು ಸಿದ್ಧತೆಗಳು ಈಗಾಗಲೇ ಕೈಗೊಂಡಿದ್ದು, ಆಸ್ಪತ್ರೆಗೆ ಬರುವ ಎಲ್ಲರೂ ಈ ಗ್ರಂಥಾಲಯ ಬಳಕೆ ಮಾಡಬಹುದು. ಕಥೆ, ಕಾದಂಬರಿ, ಕವನ, ನಾಟಕ, ಪುರಾಣ ಇನ್ನಿತರ ಪುಸ್ತಕಗಳನ್ನು ಇನ್ನು ಇಲ್ಲಿ ಓದಬಹುದು. ಪುಸ್ತಕ ಓದುವುದು, ಹಿತವಾದ ಸಂಗೀತ ಕೇಳುವುದು ಅನಾರೋಗ್ಯದಿಂದ ದಾಖಲಾಗುವ ವ್ಯಕ್ತಿಯ ಸ್ವಸ್ಥ ಆರೋಗ್ಯಕ್ಕೆ ಬೇಕಾಗಿರುವ ಚಿಕಿತ್ಸೆ ಎನ್ನಬಹುದು. ಈ ದೃಷ್ಟಿಯಿಂದ ಗಾಂಧಿ ಆಸ್ಪತ್ರೆಯಲ್ಲಿ ಗ್ರಂಥಾಲಯ ತೆರೆಯುವ ಸಂಗತಿಯೇ ವಿಶಿಷ್ಟ.