Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಕಾರಂತರು ಮತ್ತು ಯಕ್ಷಗಾನ
    Article

    ವಿಶೇಷ ಲೇಖನ | ಕಾರಂತರು ಮತ್ತು ಯಕ್ಷಗಾನ

    October 10, 2023Updated:October 11, 2023No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಕಾರಂತರು ಮತ್ತು ಯಕ್ಷಗಾನ’ ಎಂಬ ವಿಚಾರ ಮಾತಾಡುವಾಗ ನೆನಪಿಡಬೇಕಾದ ಸಂಗತಿ ಎಂದರೆ, ಯಾವುದೇ ಕ್ಷೇತ್ರದಲ್ಲಿ ಡಾ. ಶಿವರಾಮ ಕಾರಂತರು ಮಾಡುವ ಕೆಲಸಗಳು ಬೇರೆ ಯಾರೂ ಮಾಡಿದ ಹಾಗಿಲ್ಲ. ದೃಷ್ಟಿ ಧೋರಣೆ, ವಿವರ, ನಿರ್ವಹಣೆ, ಸಂಘಟನೆಗಳಲ್ಲಿ ಅವರದೊಂದು ವಿಭಿನ್ನ ಮಾರ್ಗ; ಮಾರ್ಗ ಪ್ರವರ್ತಕ ಮಾರ್ಗ, ಯಕ್ಷಗಾನದಲ್ಲಾದರೂ ಹಾಗೆಯೇ. ಈ ವಿಚಾರವನ್ನಿಟ್ಟುಕೊಂಡು, ಇಂದಿನ ಗೋಷ್ಠಿಯಲ್ಲಿ ಪ್ರಸ್ತಾವಿತವಾದ ವಿಚಾರಗಳ ಸುತ್ತ ಒಂದಿಷ್ಟು. (ಇದೇ ವಿಷಯವಾಗಿ, ನಾನು ಈಗಾಗಲೇ ‘ಶತಮಾನದ ಕೊನೆಯಲ್ಲಿ ಕಾರಂತರು’ ಎಂಬ ವಿಷಯದಲ್ಲಿ ಇಸವಿ 2000ದಲ್ಲಿ ನಡೆದ ಗೋಷ್ಠಿಯಲ್ಲಿ ಮಾತಾಡಿರುವುದರಿಂದ ಕೆಲವು ಅಂಶಗಳ ಪುನರಾವರ್ತನೆ ಇಲ್ಲಿ ಅನಿವಾರ್ಯ.)

    ‘ಕಾರಂತರು ಯಕ್ಷಗಾನಕ್ಕೆ ತಮ್ಮ ವ್ಯಕ್ತಿತ್ವವನ್ನು ಕೊಟ್ಟರು’ ಎಂಬ ಒಂದು ಮಾತಿನಿಂದ, ಯಕ್ಷಗಾನ ಗುರು ಹೊಸ್ತೋಟ ಮಂಜುನಾಥ ಭಾಗವತರು, ಕಾರಂತ-ಯಕ್ಷಗಾನ ಸಂಬಂಧದ ನಿರ್ವಚನ ನೀಡಿದಂತಾಗಿದೆ. ಯಕ್ಷಗಾನದ ಸಾಕಲ್ಯದೃಷ್ಟಿಯ ಗ್ರಹಿಕೆ ಇರುವ ದೇಶಿ ಪದ್ಧತಿಯ ಅಭಿವ್ಯಕ್ತಿಯ ಭಾಗವತರು ಇಲ್ಲಿ ಉದ್ಘಾಟಕರಾದುದು ಅತ್ಯಂತ ಉಚಿತ, ಅಂತೆಯೆ ಯಕ್ಷಗಾನದ ವಿವಿಧ ಅಂಗಗಳಲ್ಲಿ ಆಳವಾದ ಅಭ್ಯಾಸ ನಡೆಸಿ, ಸಂಘಟನಾತ್ಮಕವಾಗಿ, ವಿಶೇಷತಃ ದೀವಟಿಗೆ ಬೆಳಕಿನ ಯಕ್ಷಗಾನದ ಪುನರುತ್ಥಾನದಲ್ಲಿ ಆದ್ಯರೆನಿಸಿ, ಸಂಶೋಧನೆಯಲ್ಲಿ ದೊಡ್ಡ ಕೆಲಸ ಮಾಡಿರುವ ಡಾ.ಕೆ.ಎಂ. ರಾಘವ ನಂಬಿಯಾರರು.

    ಕಾರಂತರು ಈ ಕ್ಷೇತ್ರದಲ್ಲಿ ಪ್ರವರ್ತಿಸಿದ ಘಟನೆ ಮತ್ತು ಅವರು ಕಾರ್ಯ ಮತ್ತು ವಿಧಾನಗಳು ಹೇಗೆ ದೀರ್ಘಕಾಲೀನ ಪರಿಣಾಮ, ವರ್ಚಸ್ಸು ಮತ್ತು ಮಾರ್ಗದರ್ಶನ ನೀಡಿದರೆಂಬುದನ್ನು ಸಮುಚಿತವಾಗಿ ಬಿಂಬಿಸಿದ್ದಾರೆ. ಜತೆಯಲ್ಲಿ – ಶ್ರೀ ಮುರಳ ಕಡೆಕಾರ್, ಪೃಥ್ವಿರಾಜ ಕವತ್ತಾರು, ಸುಜಯೀಂದ್ರ ಹಂದೆ ಇವರು ವ್ಯವಸ್ಥಿತ ಅಭ್ಯಾಸಯುತ ಪ್ರಬಂಧಗಳನ್ನು ಮಂಡಿಸಿ, ಯಕ್ಷಗಾನ ವಿಮರ್ಶೆಯ ಕ್ಷೇತ್ರದಲ್ಲಿ ಸಮರ್ಥರಾದ ಹೊಸಪೀಳಿಗೆಯ ಚಿಂತಕರು ಬರುತ್ತಿರುವ ಸಂತೋಷಕರ, ಶ್ಲಾಘ್ಯ ವಿದ್ಯಮಾನವನ್ನು ಕಾಣಿಸಿದ್ದಾರೆ.

    ಕಾರಂತರ ಯಕ್ಷಗಾನ ಚಿಂತನೆ, ಸಂಶೋಧನೆ ಮತ್ತು ರಂಗ ಪ್ರಯೋಗಗಳ ಬಗೆಗೆ ಹಲವು ವರ್ಷಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ. ಕಾರಂತರ ಅನೇಕ ವಿಚಾರಗಳನ್ನು ತೀರ್ಮಾನಗಳನ್ನು ಒಪ್ಪದವರು ಸಹ ಕಾರಂತರು ಈ ಕಲೆಗಾಗಿ ಮಾಡಿದ ಬಲುದೊಡ್ಡ ಕೆಲಸವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬಷ್ಟು ಘನವಾಗಿದೆ ಅವರ ಕೆಲಸದ ದಿಕ್ಕು, ಪ್ರಮಾಣ ಮತ್ತು ಅಂಶಗಳು. ಅವರು ಈ ಕ್ಷೇತ್ರವನ್ನು ಪ್ರವೇಶಿಸಿದುದರಿಂದ ಈ ಕಲೆಯ ಸಂರಕ್ಷಣೆ, ಪರಿಷ್ಕರಣೆ, ಪ್ರಸಾರ ಮತ್ತು ಅಧ್ಯಯನ ಈ ನಾಲ್ಕು ಕ್ಷೇತ್ರಗಳಿಗೆ ದೊಡ್ಡ ಪ್ರಯೋಜನವಾಗಿದೆ. ಕಾರಂತ ಪ್ರಭಾವ, ಕಾರಂತ ಪ್ರೇರಣೆ ಮತ್ತು ಕಾರಂತ ಕಾರ್ಯ ಇವು ಈ ಕಲೆಯ ಇತಿಹಾಸದ ಬಲು ದೊಡ್ಡ ಅಧ್ಯಾಯ.

    ಕಾರಂತರು ಯಕ್ಷಗಾನದಲ್ಲಿ ಈ ನೆಲೆಗಳಲ್ಲಿ ಕೆಲಸ ಮಾಡಿದ್ದಾರೆ.
    1. ಅಧ್ಯಯನ – ಸಂಶೋಧನ 2. ಕಲಾರೂಪ ರಕ್ಷಣ, ಶಿಕ್ಷಣ 3. ಕಲೆಯ ಮುಖ್ಯ ಪ್ರದೇಶದ ಹೊರಗೆ ಪ್ರಸಾರ
    4. ಪ್ರಾಯೋಗಿಕ ರಂಗದ ಸೃಜನ 5. ಕಲಾವಿದರಿಗೆ ಮನ್ನಣೆ, ಹಿತರಕ್ಷಣೆ

    ಈ ಐದರಲ್ಲೂ ಅವರ ತುಡಿತ, ದುಡಿತಗಳು, ಪ್ರಾಮಾಣಿಕ ಕಾಳಜಿಯ, ಆಳ ಆಗಲಗಳುಳ್ಳ, ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಕೆಲಸಗಳು. ಭಿನ್ನಾಭಿಪ್ರಾಯಗಳ ಪ್ರಶ್ನೆ ಬೇರೆ. ಅವರ ವಿಶ್ವಮುಖಿಯಾದ ಹತ್ತು ಹಲವು ಕೆಲಸಗಳ ವ್ಯಾಪ್ತಿ ವಿಸ್ತಾರಗಳ ಮಧ್ಯೆಯೂ ನಿರಂತರವಾಗಿ ಈ ಕಲೆಯ ಕುರಿತು ಆಸಕ್ತಿ ಪ್ರವೃತ್ತಿಗಳನ್ನು ಕಾದುಕೊಂಡು ಆರು ದಶಕಗಳ ಕಾಲ ಅವರು ಕೆಲಸ ಮಾಡಿದ್ದಾರೆ. ಹತ್ತಾರು ಜನರು ಮಾಡುವಷ್ಟು ಒಬ್ಬರೇ ಮಾಡಿದ್ದಾರೆ.

    ಲೇಖನ, ಪ್ರಬಂಧ, ಟಿಪ್ಪಣಿ, ಗ್ರಂಥಗಳ ರೂಪದಲ್ಲಿ ಪ್ರಾಯಃ ಅವರು ಸುಮಾರು ಐದು ಸಾವಿರ ಮುದ್ರಿತ ಪುಟಗಳನ್ನು ಬರೆದಿದ್ದಾರೆ. ಅವರ ‘ಯಕ್ಷಗಾನ ಬಯಲಾಟ’ ಮತ್ತು (ಮುಂದೆ ಬಂದ ಆದರ ಇಂಗ್ಲಿಷ್ ಆವೃತ್ತಿಗಳು) ಆ ಬಗೆಯ ಮೊದಲ ಬರಹಗಳಷ್ಟೇ ಅಲ್ಲ, ಇಂದಿಗೂ, ಶ್ರೇಷ್ಠತೆಯಲ್ಲೂ ದೊಡ್ಡಮಟ್ಟದವುಗಳೇ, ಹಲವು ಕಲೆಗಳನ್ನು ನೋಡಿ, ಅಭ್ಯಸಿಸಿದ, ದೇಶದ, ಜಗತ್ತಿನ ಕಲಾವಿಮರ್ಶೆಯ ಹರಹನ್ನು ಬಲ್ಲ ಅವರಿಗೆ ಒದಗಿದ ನೋಟ ಅನ್ಯ ಭಿನ್ನವಾದುದು. ಜೊತೆಗೆ ಆ ಕಾಲದಲ್ಲಿ ಹಲವು ಪ್ರತಿಕೂಲಗಳ ಮಧ್ಯೆ, ಸ್ವಂತ ಶ್ರಮ ಮತ್ತು ವೆಚ್ಚದಲ್ಲಿ ಅವರು ಕ್ಷೇತ್ರ ಕಾರ್ಯ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡಿದ್ದಾರೆ. ಈ ಕಲೆ ಏನು ಮತ್ತು ಅದನ್ನು ಹೇಗೆ ನೋಡಬೇಕು ಎಂಬ ಅದರ ಒಳಗಿನ, ಹೊರಗಿನ, ಹತ್ತಿರದ, ದೂರದ ರಸಿಕರಿಗೆ ಅವರು ತಿಳಿಸಿದ್ದಾರೆ. ಗ್ರಂಥಗಳಿಂದ ತೊಡಗಿ ಸಾಂದರ್ಭಿಕ ಟಿಪ್ಪಣಿ, ಬ್ರೋಶ‌ರ್ ಗಳವರೆಗೆ ಬರೆದಿದ್ದಾರೆ. ಅದಕ್ಕಾಗಿ ಒಂದು ಪಾಂಡಿತ್ಯ ಭಾರವೂ ಅಲ್ಲದ, ಲಘುವೂ ಆಗದ ಭಾಷಾಶೈಲಿಯೊಂದನ್ನು ರೂಪಿಸಿದ್ದಾರೆ. ಅವರ ಬರಹಗಳು ಸಾಕಷ್ಟು ಅಧ್ಯಯನಕ್ಕೆ ಒಳಗಾಗಿಲ್ಲ ಎಂಬುದು ಬೇಸರದ ವಿಚಾರ. ಪಾರ್ತಿಸುಬ್ಬನ ವಿವಾದದಿಂದಾಗಿ ಕಾರಂತರು ಹೇಳಿದ ಬಹುಮೂಲ್ಯ ವಿಚಾರಗಳು ಅಲಕ್ಷಿತವಾದುವೆನಿಸುತ್ತದೆ.

    ಕಲೆಯ ಅಧ್ಯಯನ ಕೇವಲ ತಾತ್ವಿಕ (Theoretical) ಆಗದೆ, ಪ್ರಾತ್ಯಕ್ಷಿಕವಾಗಬೇಕೆಂಬ ನಿಲುವಿನಿಂದ ಕಾರಂತರು ಏರ್ಪಡಿಸಿದ ಗೋಷ್ಠಿಗಳು (1958ರ ಬ್ರಹ್ಮಾವರ ಯಕ್ಷಗಾನ ಗೋಷ್ಟಿಯಿಂದ ತೊಡಗಿ ಹಲವು) – ಅಧ್ಯಯನಕ್ಕೆ ಇನ್ನೊಂದು ಆಯಾಮ ಒದಗಿಸಿದುವು. ಅವರು ನಡೆಸಿದ ಯಕ್ಷಗಾನ ರಾಗ ಅಧ್ಯಯನ ಶಿಬಿರಗಳು, ಬಹು ಮಹತ್ವದ ಉಪಕ್ರಮಗಳು, ಪ್ರಸಂಗ, ವೇಷಭೂಷಣ, ರಂಗವಿಧಾನ – ಈ ಎಲ್ಲಾ ಅಂಶಗಳ ಅಧ್ಯಯನದಲ್ಲೂ ಅವರೇ ಆದ್ಯರು.

    ಯಕ್ಷಗಾನದಂತಹ ಕಲೆಯ ಅಸ್ತಿತ್ವದ ಅಡಿಪಾಯವು ಅದರ ರೂಪ (Form) ಎಂಬುದನ್ನು ಸರಿಯಾಗಿ ಮನಗಂಡ ಅವರು, ಕಲಾರೂಪ ಸಂಪ್ರದಾಯದ ಸೌಂದರ್ಯ ರಕ್ಷಣೆಗೆ ಬದ್ಧರಾಗಿ ಪ್ರವೃತ್ತರಾದರು. ಬಡಗುತಿಟ್ಟು ಯಕ್ಷಗಾನದಲ್ಲಿ ಇಂದಿನವರೆಗೂ ಸ್ಥೂಲವಾಗಿ ಅದರ ರೂಪ ಉಳಿದು ಬರಲು ಕಾರಂತರ ವಿಚಾರಗಳ ಪ್ರಭಾವವು ಮುಖ್ಯವಾದ ಕಾರಣ. ಜತೆಗೆ ಯಕ್ಷಗಾನ ಶಿಕ್ಷಣ ಪ್ರಶಿಕ್ಷಣಗಳಿಗಾಗಿ ಕೇಂದ್ರವೊಂದನ್ನು ಸೃಷ್ಟಿಸುವಲ್ಲೂ (ಎಂಜಿಎಂ ಕಾಲೇಜು ಯಕ್ಷಗಾನ ಕೇಂದ್ರ) ಅವರ ಪ್ರಯತ್ನಗಳು ಪ್ರಧಾನ ಕಾರಣ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಅವರು ಸ್ತ್ರೀ ವೇಷಕ್ಕೆ ತಯಾರಿಸಿದ ‘ಕಿರಣ’ದ ಮುಡಿ, ಸ್ತ್ರಿ-ಪುರುಷ ವೇಷಗಳ ನಡುವಿನ ವಿಸಂವಾದವನ್ನು ನಿವಾರಿಸಿ ಅನುರೂಪ್ಯ (harmony) ಸಾಧಿಸಿತು. ಆದೊಂದು ಅಸಾಮಾನ್ಯ ಸೃಜನ. ಅದು ಎಲ್ಲೆಡೆ ಸ್ವೀಕೃತವೂ ಆಯಿತು.

    ಕಲೆಯ ಭೌಗೋಳಿಕ ಪ್ರದೇಶದ ಹೊರಗೆ, ಪ್ರಾಂತ, ಪರಪ್ರಾಂತ, ವಿದೇಶಗಳಲ್ಲಿ ಈ ಕಲೆಯ ಕುರಿತ ಕುತೂಹಲ, ತಿಳಿವು ಮತ್ತು ಆಸಕ್ತಿ ಮೂಡಿಸಲು ಕಾರಂತರ ಯತ್ನಗಳು ಸಫಲವಾದವು. ಆ ಪ್ರಯತ್ನಗಳು ಮೊದಲೇ ಆರಂಭವಾಗಿದ್ದರೂ, ಅವುಗಳ ಹಿಂದೆ ಖಚಿತ ಸೈದ್ಧಾಂತಿಕ ನಿಲುವುಗಳಾಗಲಿ, ಕಾರಂತರಂತಹ ವ್ಯಕ್ತಿತ್ವದ ವರ್ಚಸ್ಸಾಗಲೀ ಇರಲಿಲ್ಲ. ಸಾಂಪ್ರದಾಯಿಕ ರೂಪದಲ್ಲೂ, ಅವರದಾದ ಪ್ರಾಯೋಗಿಕ (ಯಕ್ಷರಂಗ) ರೂಪದಲ್ಲೂ ಅವರು ಆ ಕಲೆಯನ್ನು ಸೀಮೋಲ್ಲಂಘನ ಮಾಡಿಸಿದರು. ಜತೆಗೆ ಬರಹಗಳಿಂದ ತಿಳಿವು ಮೂಡಿಸಿದರು. ಈ ಕಲೆಗೆ ಅಧಿಕೃತ ಮನ್ನಣೆ ಒದಗಿಸುವಲ್ಲಿ ಕೆಲಸಮಾಡಿ ಯಶಸ್ವಿಯಾದರು.

    ಕಾರಂತರು ಯಕ್ಷಗಾನವನ್ನು ಪ್ರೀತಿಯಿಂದ ಕಂಡರೂ, ಅವರದು ಕೇವಲ ಅಭಿಮಾನವಾಗದ ಚಿಕಿತ್ಸಕ ದೃಷ್ಟಿಯಾದುದರಿಂದ ಅದರ ವಿವಿಧ ಅಂಗಗಳಲ್ಲೂ, ಅಭಿವ್ಯಕ್ತಿ ವಿಧಾನಗಳಲ್ಲೂ ಅವರಿಗೆ ಅದರ ಅರೆಕೊರೆಗಳು ಕಾಣದಿರಲಿಲ್ಲ. ಅದನ್ನು ಪರಿಷ್ಕರಿಸಿ ಆಧುನಿಕ ಪ್ರೇಕ್ಷಕನಿಗೆ ಒಪ್ಪಿಗೆಯಾಗುವ ಒಂದು ನೂತನ ಪ್ರಾಯೋಗಿಕ ರೂಪದ ಕವಲು ಅಗತ್ಯವೆನಿಸಿ, ಅವರು ತಮ್ಮದಾದ ರೀತಿಯಲ್ಲಿ ಆದನ್ನು ಸಾಧಿಸಿದರು. ‘ಯಕ್ಷರಂಗ’ ಎಂಬ ‘ಬ್ಯಾಲೆ’ ಮಾರ್ಗದ ರಚನೆಯ ಮೂಲಕ ಅದು ಸಾಕಷ್ಟು ತೀವ್ರವಾದ ಪರ-ವಿರೋಧ ಅಭಿಪ್ರಾಯಗಳನ್ನು ಸೃಷ್ಟಿಸಿತು. ಯಕ್ಷಗಾನದ ಅಂಗಗಳನ್ನು ಬಳಸಿ, ಅವರು ರೂಪಿಸಿದ ‘ಕಿನ್ನರ ನೃತ್ಯ’ವು ಒಂದು ಬಗೆಯಿಂದ ಯಕ್ಷರಂಗದ ಅಭ್ಯಾಸ ರಂಗ, ಬುನಾದಿ. ಅಲ್ಲಿಂದ ಆರಂಭಿತವಾದ ಅವರ ಪರಿಷ್ಕಾರ-ಪ್ರಯೋಗ ಅಭಿಯಾನ ಯಕ್ಷರಂಗವಾಗಿ ಅರಳಿತು.

    ಯಕ್ಷಗಾನದಂತಹ ಕಲೆಗಳಲ್ಲಿ ಸೂಕ್ತವನ್ನು ತರುವುದು ಅಗತ್ಯ. ಅದರ ಸಂಗೀತ ನಾಜೂಕಾಗಬೇಕು, ವೇಷಗಳ ಭಾರ ಕಡಿಮೆ ಆಗಬೇಕು, ಪರಂಪರೆಯ ಹೆಸರಿನ ಎಲ್ಲವೂ ಸ್ವೀಕಾರವಾಗಬೇಕಿಲ್ಲ. ನೃತ್ಯ ಚಲನೆಯಲ್ಲಿ, ವಿಸ್ತಾರಕ್ಕೆ ಅವಕಾಶಗಳಿವೆ, ಮಾತುಗಾರಿಕೆ ಇಲ್ಲದ ರೂಪದಲ್ಲೇ ಅದನ್ನು ಉಳಿದ ಅಂಗಗಳನ್ನು ಸಶಕ್ತಗೊಳಿಸಿ ಪ್ರದರ್ಶಿಸಬಹುದು – ಮೊದಲಾದ ಅವರ ವಿಚಾರಗಳು ಸೈದ್ಧಾಂತಿಕವಾಗಿ ಸೂಕ್ತವೇ. ಕಲಾಕ್ಷೇತ್ರದಲ್ಲಿ ಮಾನ್ಯವಾದ, ಪೂರ್ವೋದಾಹರಣೆಗಳುಳ್ಳ ಸಿದ್ಧಾಂತಗಳೇ. ಆದರೆ ಅವರು ಅದಕ್ಕಾಗಿ ಸೃಜಿಸಿದ ಬದಲಿಗಳು, ಪರ್ಯಾಯಗಳು ಕಲಾತ್ಮಕವಾಗಿ ಉತ್ಕೃಷ್ಟವಾಗಿಲ್ಲ. ವೇಷಭೂಷಣಗಳಲ್ಲಿ ಅವರು ಸೃಜಿಸಿದ ಹೊಸ ಮಾದರಿಗಳ ಸೌಂದರ್ಯಾಂಶ (aesthetics) ಪ್ರಶ್ನಾರ್ಹ.

    ಯಕ್ಷರಂಗದ ನರ್ತನ ಹಾಗೂ ಚಲನಗಳನ್ನು ರೂಪಿಸುವಾಗ ಅವರು ಪಾಶ್ಚಾತ್ಯ ‘ಬ್ಯಾಲೆ’ ನರ್ತನದ ಗಾಢವಾದ ಪ್ರಭಾವಕ್ಕೊಳಗಾದರು. ಭಾವಾಭಿವ್ಯಕ್ತಿಯು ಚಲನೆ, ತರಂಗಿತತೆ, ಲಯ, ಸಂಗೀತಗಳ ಮೇಳನದಿಂದ ಆಗಬೇಕು. ಮುದ್ರೆಗಳಿಂದ ಮಾತಿನಿಂದ ಅಲ್ಲ ಎಂಬ ಅವರ ನಿಲುವು ಬ್ಯಾಲೆಯ ಕುರಿತ ಅವರ ಒಲವಿನಿಂದ ಬಂದದ್ದು. ಪ್ರಭಾವ ಸ್ವೀಕಾರವು ಕಲೆಯಲ್ಲಿ ತಪ್ಪಲ್ಲ, ಸಹಜ. ಪಾಶ್ಚಾತ್ಯವೆಂಬುದರಿಂದಲೂ ‘ಬ್ಯಾಲೆ ಮಾದರಿ’ ತಿರಸ್ಕಾರವಲ್ಲ. ಆದರೆ ‘ಬ್ಯಾಲೆ’ಯ ಅಂದ, ಕಲಾ ವ್ಯಾಕರಣ ನಿಂತಿರುವುದು ಮಿತವಾದ, ಸರಳ, ಕೈ ಮೈ ಕಾಣುವ ವೇಷಕ್ರಮ ಮತ್ತು ವಿಶಿಷ್ಟ ಚಲನ ನರ್ತನ ವಿಧಾನದಿಂದ. ನಮ್ಮ ಪಾರಂಪರಿಕ ಕಲೆಗಳು, ವೇಷ ಎಷ್ಟೇ ಸರಳಗೊಳಿಸಿದರೂ, ‘ಬ್ಯಾಲೆ’ ವ್ಯಾಕರಣಕ್ಕೆ ತೀರಾ ಭಿನ್ನ ಸ್ವರೂಪದವು. ಅಲ್ಲದೆ – ಒಂದು ಕಲೆಯನ್ನು ಪರಿಷ್ಕರಿಸುವಾಗ ಅದರ ದುರ್ಬಲ ಅಂಗಗಳನ್ನು ಕಡೆಗಣಿಸಬಹುದೆ ಹೊರತು, ಶಕ್ತಿಶಾಲಿ ಅಂಗಗಳನ್ನಲ್ಲ. ಪರಂಪರೆಯ ಅಂಗಗಳನ್ನು ಚೆನ್ನಾಗಿ ಬಳಸಿ, ಆ ಬಳಿಕ ಕಂಡ ಕೊರತೆಯನ್ನು ನಾವೀನ್ಯದಿಂದ ತುಂಬಿಸಬೇಕು, ಬಳಸದೆ ಅಲ್ಲ. ಯಕ್ಷರಂಗದ ಸಮಸ್ಯೆ ಇದು ಎಂದು ನನ್ನೆಣಿಕೆ. ಪಾರಂಪರಿಕ ಪ್ರಕಾರದ ಪರಿಷ್ಕಾರವು ‘ವಿಸ್ತರಣೆ’ ಮತ್ತು ‘ನಾಜೂಕೀಕರಣ’ ಆಗಬೇಕೆ ಹೊರತು, ಅದು ಬೇರೆ ಅನಿಸಬಾರದಷ್ಟೆ ? ಆದರೆ ಪಾರಂಪರಿಕ ರೂಪದ ಉಳಿವು, ಪ್ರಾಯೋಗಿಕ ಸ್ವರೂಪದ ಶಾಖಾರೂಪದ ಗೆಲುವು – ಇವೆರಡೂ ಬೇಕೆಂಬ ಅರಿವು ಅವರಿಗೆ ಸ್ಪಷ್ಟವಾಗಿ ಇದ್ದಿತು. ಕಾರಂತರು ಪ್ರದರ್ಶನಗಳ ಮಟ್ಟಕ್ಕೆ ಬರುವಾಗು ಸೈದ್ಧಾಂತಿಕವಾಗಿ ಗಟ್ಟಿ, ಅನ್ವಯದಲ್ಲಿ ಚರ್ಚಾಸ್ಪದ, ಆರಂಭಿಕ ಕರ್ತೃಗಳಲ್ಲಿ (Pioneer) ಕಾಣುವ ನ್ಯೂನತೆಗಳು, ಎಲ್ಲ ರಂಗಗಳಲ್ಲೂ ಸಾಮಾನ್ಯ.

    ರಾಮಾಯಣ ಪ್ರಸಂಗಗಳ ಕರ್ತೃ ಪಾರ್ತಿಸುಬ್ಬನ ದೇಶಕಾಲ ಕರ್ತತ್ವ ವಿಚಾರದಲ್ಲಿ ಕಾರಂತರ ನಿಲುವು ದೀರ್ಘವಾಗಿ
    ಚರ್ಚೆಗೊಂಡಿದೆ. ಕನ್ನಡದ ದೊಡ್ಡ ಸಂಶೋಧನ ವಿವಾದಗಳಲ್ಲಿ ಅದೂ ಒಂದು. ಯಕ್ಷಗಾನ ಕವಿಯೊಬ್ಬನು ಅದಕ್ಕೆ ವಸ್ತುವಾದುದು ಒಂದು ಬಗೆಯ ಲಾಭವೆ. ಕಾರಂತರು ಅದರಲ್ಲಿ ತಮ್ಮ ಅಭಿಪ್ರಾಯಗಳನ್ನು ಕೆಲಮಟ್ಟಿಗೆ ಸಂಶೋಧಕರಿಗೆ ಸಹಜವಾದ ರೀತಿಯಲ್ಲಿ, ಬದಲಿಸಿಕೊಂಡಿರುವುದು ನಿಜ. ಅದರೂ ಅವರ ಕೊನೆಯ ನಿಲುವು ಕವಿಯು ಅನಾಮಧೇಯ (ಆಜ್ಞಾತ) ಪ್ರದೇಶವೂ ನಿರ್ಧೃತ-ಅನಿರ್ಧೃತ ಎಂದಿರುವುದು ಪಾರ್ತಿಸುಬ್ಬನ ಕರ್ತೃತ್ವದ ಪರವಾಗಿ ನೀಡಲಾದ ಪುರಾವೆಗಳಿಗೆ ಸಮಂಜಸ ಪರಿಷ್ಕಾರವಾಗಿಲ್ಲ.

    ತೆಂಕುತಿಟ್ಟು ಯಕ್ಷಗಾನದಲ್ಲಿ ಕಾರಂತರು ಕೆಲಸ ಮಾಡಲಿಲ್ಲ. ಒಂದು ಕರೆಯು ಎಲ್ಲ ಪ್ರಾದೇಶಿಕ ಶೈಲಿಗಳಲ್ಲಿ ಒಬ್ಬನು ಕೆಲಸ ಮಾಡಲೇಬೇಕೆಂದೂ ಇಲ್ಲ. ಅವರು ‘ತೆಂಕುತಿಟ್ಟು ಯಕ್ಷಗಾನ ಅಲ್ಲ’ ಎಂದು ಹೇಳುವುದಿಲ್ಲ. ಆದರೆ – ಅವರು ತೆಂಕುತಿಟ್ಟಿನ ಬಗೆಗೆ ತೋರಿದ ಪರೋಕ್ಷ ಅವಜ್ಞೆ ಅಥವಾ ಕಿಂಚಿನ್ಮಾತ್ರ ಗಮನವು ಆ ಧ್ವನಿ ಹೊಂದಿದಂತೆ ಕಂಡಿರುವುದರಿಂದ ಕಾರಂತರ ಮಹಾನ್ ವ್ಯಕ್ತಿತ್ವದಿಂದ ತೆಂಕುತಿಟ್ಟಿನ ರಕ್ಷಣಾ ಪ್ರಸರಣಕ್ಕಾಗಬಹುದಾದ ಪ್ರಯೋಜನವು ಸಿಗಲಿಲ್ಲ. ಬಹು ಕಾಲ-ತೆಂಕುತಿಟ್ಟು ಒಂದು ಅಂಚಿನ ರೂಪ (marginal minor form) ಎಂಬಂತಹ ತಿಳುವಳಿಕೆ ಆಕಾಡಮಿಕ್ ವಲಯಗಳಲ್ಲಿ ರೂಢವಾಗಲು ಕಾರಣವೂ ಆಯಿತು.

    ಕಾರಂತರ ಬಹು ಆಯಾಮಿ ದೃಷ್ಟಿ ಯಕ್ಷಗಾನ ಅಭಿಯಾನದಲ್ಲಿ ಕಲೆಗಳಷ್ಟೇ ಅಲ್ಲ ಕಲಾವಿದನ ಹಿತರಕ್ಷಣೆಗೂ ಮಹತ್ತ್ವ ಸಂದಿದೆ. ಸಾಂಸ್ಥಿತಿಕವಾಗಿ, ವೈಯಕ್ತಿಕವಾಗಿ ಅವರು ಕಲಾವಿದರಿಗೆ ನೆರವಾಗಿದ್ದಾರೆ, ಕಲಾವಿದರಿಗೆ ಆರ್ಥಿಕ ನೆರವು ನೀಡಿದ್ದಾರೆ, ಕೊಡಿಸಿದ್ದಾರೆ, ಕಲಾವಿದರನ್ನು ಪ್ರೀತಿಯಿಂದ ಕಂಡಿದ್ದಾರೆ.

    ಸ್ವಭಾವತಃ ಕಾರಂತರು ‘ಸಾಂಸ್ಥಿಕ’ ಕೆಲಸಗಳಿಗೆ ಒಗ್ಗಿಕೊಂಡವರಲ್ಲ. ಅವರೇ ಒಂದು ಸಂಸ್ಥೆ. ಹೀಗಿರುತ್ತ ಅವರ ಯಕ್ಷಗಾನದ ಬಗೆಗಿನ ವಿಸ್ತಾರವಾದ ಕಾರ್ಯ ಯೋಜನೆಗಳಿಗೆ ಮಣಿಪಾಲದ ಅಕಾಡಮಿಯ ಬೆಂಬಲ, ಧೀಮಂತ ಸಾಂಸ್ಕೃತಿಕ ನೇತಾರ ಪ್ರೊ. ಕು.ಶಿ. ಹರಿದಾಸ ಭಟ್ಟರ ಸಹಯೋಗ ದೊರೆತುದು ಒಂದು ಸುಯೋಗ.

    ಯಕ್ಷಗಾನದ ಕಾರಂತ ಪ್ರಸಂಗ – ಒಂದು ಪುಣ್ಯ ಕಥಾನಕ. ಒಂದು ಮಹಾಪ್ರಬಂಧ. ಈ ಗೋಷ್ಠಿ ಅದನ್ನು ಮೆಲುಕಿಹಾಕಿ, ವಿವೇಚಿಸಿ, ಅದಕ್ಕೆ ಸಾಕಷ್ಟು ನ್ಯಾಯ ಒದಗಿಸಿದೆ. ಅದರಲ್ಲಿ ಭಾಗವಹಿಸುವುದು ನಮಗೆಲ್ಲ ಒಂದು ಮನ್ನಣೆ. ಆ ಕಲಾಋಷಿಯ ಯೋಚನೆ, ಯೋಜನೆಗಳನ್ನು ವಿಮರ್ಶಿಸಲು ನಾವೆಷ್ಟರವರು ಎಂದೂ ಅನಿಸುತ್ತದೆ. ಆದರೆ ಅದನ್ನು ಬದಿಗಿಟ್ಟು ಚಿಂತನ ಮಂಥನ ನಡೆಸುವುದು, ಅವರಿಗೆ ನಾವು ಕೊಡುವ ಗೌರವ.

    ಈಗ ಆಗಬೇಕಾದುದು ಕಾರಂತರು ಅದಾವ ಅಧ್ಯಯನದಿಂದ, ತೀವ್ರ ಚಿಂತನೆಯಿಂದ ಸತತ ಶ್ರಮ ಪರಿಶ್ರಮ ಪ್ರವೃತ್ತಿಗಳಿಂದ, ಪ್ರೀತಿ ವಿಮರ್ಶೆಗಳಿಂದ ಈ ಕಲೆಯನ್ನು ಕುರಿತು ಅಗಾಧ ಕಾರ್ಯಗೈದರೋ ಆದರ ವ್ಯವಸ್ಥಿತವಾದ ಮುಂದುವರಿಕೆ, ಎಚ್ಚರದ ಮುನ್ನಡೆ ಕಾರಂತರ ಪ್ರಜ್ಞೆಯ ಉತ್ತರೋತ್ತರ ವಿಸ್ತರಣ.

    • ಡಾ. ಎಂ. ಪ್ರಭಾಕರ ಜೋಶಿ

    ಯಕ್ಷಗಾನ ತಾಳಮದ್ದಳೆಯ ಓರ್ವ ಅಗ್ರಗಣ್ಯ, ಸೃಜನಶೀಲ ಅರ್ಥಧಾರಿ, ವಿಮರ್ಶಕ ಮತ್ತು ಬಹುಮುಖಿ ಪಾಂಡಿತ್ಯದ ಡಾ. ಎಂ. ಪ್ರಭಾಕರ ಜೋಶಿ

    ಡಾ. ಎಂ. ಪ್ರಭಾಕರ ಜೋಶಿಯವರ 2017ರಲ್ಲಿ ಪ್ರಕಟಿತ ಸಂಕಲನ ‘ಕೊರಳಾರ’ದಿಂದ
    ಪ್ರಕಾಶಕರು: ಕಲ್ಲೂರು ನಾಗೇಶ್, ಆಶಯ ಆಕೃತಿ ಪ್ರಕಾಶನ. ಬಾವುಟೆಗುಡ್ಡೆ ಮಂಗಳೂರು
    ಛಾಯಾಚಿತ್ರ: ಯಜ್ಞ ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ತೇಜಸ್ವಿ ಮಾರ್ಗದ ಅಪರೂಪದ ಕಾದಂಬರಿ
    Next Article ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪುರಸ್ಕಾರ
    roovari

    Add Comment Cancel Reply


    Related Posts

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.