ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಐನಬೈಲು ಗ್ರಾಮದ ಶ್ರೀಮತಿ ಸೌಭದ್ರೆ ಹಾಗೂ ಶ್ರೀ ಗಣಪತಿ ಹೆಗಡೆ ಇವರ ಮಗನಾಗಿ 18.02.1965ರಂದು ಪರಮೇಶ್ವರ ಹೆಗಡೆ ಐನಬೈಲು ಅವರ ಜನನ. ತಮ್ಮ ಹತ್ತನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡಿದ ಇವರಿಗೆ ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಯಕ್ಷಗಾನ ಕಲಿಕೆಯೂ ಕೂಡ ಸ್ವಂತ ತಂದೆಯಿಂದಲೇ ಆರಂಭವಾಯಿತು. ಆಟವಾಡುವ ವಯಸ್ಸಿನಲ್ಲಿ ಕಲೆಯತ್ತ ಆಕರ್ಷಿತರಾದ ಐನಬೈಲು ಅವರು, ಆ ಕಾಲದ ಗುರುಗಳಾಗಿದ್ದ ಶ್ರೀ ಕೃಷ್ಣ ಭಾಗವತ ಬಾಳೆಹದ್ದ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿದರು. ಮುಂದೆ ಶ್ರೀ ಮಂಜುನಾಥ ಭಟ್ಟ ಶಿರಳಗಿ ಬಳಿ ನಾಟ್ಯವನ್ನು ಅಭ್ಯಸಿಸಿದರು. ಯಕ್ಷಗುರು ಶ್ರೀ ಮಂಜುನಾಥ ಭಾಗವತ ಹೊಸ್ತೋಟ ಬಳಿ ರಂಗ ತಂತ್ರವನ್ನು ಅಭ್ಯಸಿಸಿ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟವನ್ನು ಆರಂಭಿಸಿದರು. ಸೋಂದಾ ಮೇಳದಲ್ಲಿ ವೇಷಧಾರಿಯಾಗಿ ಕಾಣಿಸಿಕೊಂಡ ಇವರು ಪುಂಡು ವೇಷ ಸಾಲಿನ ಅನೇಕ ವೇಷವನ್ನು ಮಾಡಿ ಜನರಿಂದ ಮೆಚ್ಚುಗೆಯನ್ನು ಗಳಿಸಿಕೊಂಡರು. ವ್ಯವಸಾಯೀ ಮೇಳದಲ್ಲಿ ಹೆಚ್ಚು ಕಾಲ ವೃತ್ತಿಯನ್ನು ಮಾಡದೆ ಹವ್ಯಾಸಿಯಾಗಿ ಮುಂದುವರೆದರು.
ಯಕ್ಷಗಾನ ರಂಗದ ಸರ್ವಾಂಗೀಣ ಸಾಧನೆಯ ಬೆರಳೆಣಿಕೆಯ ಸಾಧಕರಲ್ಲಿ ಒಬ್ಬರೆಂಬ ಹೆಮ್ಮೆ. ವೇಷಧಾರಿಯಾಗಿ – ಭಾಗವತರಾಗಿ, ಚೆಂಡೆ – ಮದ್ದಳೆಯ ಅರಿವನ್ನು ಹೊಂದಿ, ನಿರ್ದೇಶಕರಾಗಿ, ಕವಿಯಾಗಿ, ಬೆಳೆದ ಕಲಾವಿದ. ಘೋಷಯತ್ರೆ – ನವರಸಗಳು – ಜಲ ಮಹಾತ್ಮೆ ಮುಂತಾಗಿ ಸಾಮಾಜಿಕ ಸಮಸ್ಯೆಗಳ ಸಂಬಂಧವಾದ ಹದಿನಾರು ಪ್ರಸಂಗ ರಚನೆ. ಸುಮಾರು ಐವತ್ತು ಪ್ರಸಂಗಗಳ ಅರ್ಥ ವಿವರ ಮಾಡಿದ ಸಾಧನೆ ಪರಮೇಶ್ವರ ಹೆಗಡೆ ಐನಬೈಲು ಅವರದು.
ನಿರ್ದೇಶಕರಾಗಿ ಮಾಡಿದ ಸಾಧನೆ ಅಪೂರ್ವವಾದದ್ದು. ಉತ್ತರ ಕನ್ನಡದ ಅನೇಕ ಸ್ಥಳಗಳಲ್ಲದೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಮೈಸೂರಿನಲ್ಲಿ ತರಬೇತಿ ನೀಡಿದ ಅನುಭವ. ಮಕ್ಕಳು ಮಹಿಳೆಯರು ಪುರುಷರಾದಿಯಾಗಿ ಆರನೆಯ ವಯಸ್ಸಿನವರಿಂದ ಅರುವತ್ತನೆ ವಯೋಮಾನದವರಿಗೂ ಯಕ್ಷ ತರಬೇತಿ ನೀಡಿದ ಸಂತೃಪ್ತಿ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಲಾಭ್ಯಾಸಿಗಳಿಗೆ ಯಕ್ಷಗಾನ ಕಲೆಯನ್ನು ಧಾರೆಯೆರೆದ ಸಂಪನ್ನತೆ. ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಅಂಧ ಮಕ್ಕಳಿಗೂ ಯಕ್ಷಗಾನ ತರಬೇತಿಯನ್ನು ನೀಡಿ ನೂರೈವತ್ತಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ ಸಾಧನೆ. ಶಿವಮೊಗ್ಗದ ತರಂಗ ಶಾಲೆಯ ಕಿವುಡು – ಮೂಕ ಮಕ್ಕಳಿಗೂ ತರಬೇತಿ ನೀಡಿ ಕಾರ್ಯಕ್ರಮವನ್ನು ಮಾಡಿಸಿದ ತೃಪ್ತಿ.
ಯಕ್ಷ ಸಾಧನೆಗೆ ಸಂದ ಗೌರವ, ಪ್ರಶಸ್ತಿ ಹಾಗೂ ಸನ್ಮಾನ:-
ಯಕ್ಷ ಗುರು.
ಯಕ್ಷ ಕಲಾ ಬ್ರಹ್ಮ
ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಪ್ರಶಸ್ತಿ.
ವೃತ್ತಿ ಕೌಶಲ್ಯ
ಯಕ್ಷ ನಿಧಿ
ಯಕ್ಷ ತಪಸ್ವಿ
ಚಂದು ಬಾಬು ಪ್ರಶಸ್ತಿ.
ಮುಂಬಯಿ, ಕುಂದ ಕನ್ನಡ ಪ್ರಶಸ್ತಿ
ಬೆಂಗಳೂರು ಯಕ್ಷ ಸಿಂಚನ ಟ್ರಸ್ಟ್ ನೀಡುವ ಸಾರ್ಥಕ ಸಾಧಕ ಪ್ರಶಸ್ತಿ.
ಪರಮೇಶ್ವರ ಹೆಗಡೆ ಐನಬೈಲು ಅವರು ತ್ರಿವೇಣಿ ಇವರನ್ನು ಮದುವೆಯಾಗಿ ಮಗ ರವೀಶ ಹೆಗಡೆ, ಹರೀಶ ಹೆಗಡೆ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಮಗ ರವೀಶ ಹೆಗಡೆಯೂ ಕಲಾವಿದನಾಗಿ, ಯಕ್ಷ ಶಿಕ್ಷಕನಾಗಿ, ಸಂಸ್ಕೃತ ಪ್ರಾಧ್ಯಾಪಕನಾಗಿರುವುದು ಹೆಮ್ಮೆಯ ವಿಷಯ. ಒಬ್ಬರೇ ಯಕ್ಷಗಾನವನ್ನು ಉಸಿರಾಗಿಸಿಕೊಂಡು ಕಲಾ ವಿಸ್ತಾರಕ್ಕೆ ದುಡಿಯುತ್ತಿರುವ ಸಾರ್ಥಕ ಬದುಕು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.