ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಯಕ್ಷಕಲಾ ಕೇಂದ್ರ ಹಾಗೂ ಎನ್. ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಯಕ್ಷ ಸಂವಾದ ಕಾರ್ಯಕ್ರಮವು ದಿನಾಂಕ 09-03=2024ರಂದು ಪುತ್ತೂರಿನ ಸಂತ ಫಿಲೊಮಿನ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ “ಪರಮ ಶಿಷ್ಯ ಭೀಷ್ಮ” ಎಂಬ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿಲ್ಲೆ ಪ್ರತಿಷ್ಠಾನ ಕೆದಂಬಾಡಿ ಇದರ ಅಧ್ಯಕ್ಷರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಕಡಮಜಲು ಸುಭಾಷ್ ರೈ “ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರವು ಭಾರತೀಯ ಮಹಾ ಕಾವ್ಯ ಹಾಗೂ ಕಲಾ ಶ್ರೀಮಂತಿಕೆಯನ್ನು ಯಕ್ಷಪ್ರೇಮಿಗಳಿಗೆ ಯಕ್ಷಸಂವಾದ ಸರಣಿ ಕಾರ್ಯಕ್ರಮಗಳ ಮೂಲಕ ಉಣಬಡಿಸುತ್ತಿದೆ. ಯಕ್ಷ ಕಲಾ ಕೇಂದ್ರದ ವತಿಯಿಂದ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ. ಕೇಂದ್ರವು ಆಯೋಜಿಸುವ ಎಲ್ಲಾ ಕರ‍್ಯಕ್ರಮಗಳಿಗೆ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಮಾತನಾಡಿ “ಸಂಭಾಷಣೆಯೇ ತಾಳಮದ್ದಳೆಯ ಜೀವಾಳ. ತಾಳಮದ್ದಳೆಯಲ್ಲಿ ಪ್ರಮುಖವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಲಾವಿದರ ವಾಕ್ಚಾತುರ್ಯದಿಂದ. ಸಂಗೀತ ಹಾಗೂ ಸಂಭಾಷಣೆಯ ಮೂಲಕ ತಾಳಮದ್ದಳೆಯು ಪೌರಾಣಿಕ ಪಾತ್ರಗಳಿಗೆ ಜೀವತುಂಬುತ್ತದೆ. ಕಲಾವಿದರು ತಮ್ಮ ಅರ್ಥಗಾರಿಕೆಯ ಮೂಲಕ ಪ್ರೇಕ್ಷಕರನ್ನು ಬೇರೇ ಲೋಕಕ್ಕೆ ಕೊಂಡೊಯ್ಯತ್ತಾರೆ. ಕಲೆಯ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ಸಾರೋಣ.” ಎಂದು ಹೇಳಿದರು.
ಕಲಾವಿದರಾದ ಪ್ರಶಾಂತ ರೈ, ಲವ ಕುಮಾರ್, ವಿಷ್ಣು ಶರಣ, ಪ್ರೊ. ಗಣರಾಜ ಕುಂಬ್ಳೆ, ವೆಂಕಟೇಶ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ. ವಿಜಯ್ ಕುಮಾರ್ ಎಂ. ಸ್ವಾಗತಿಸಿ, ಯಕ್ಷ ಕಲಾಕೇಂದ್ರದ ಸಂಚಾಲಕ ಪ್ರಶಾಂತ ರೈ ವಂದಿಸಿದರು. ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು.