ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 140ನೆಯ ಜಯಂತ್ಯುತ್ಸವವನ್ನು ದಿನಾಂಕ 04-06-2024ರಂದು ಸಂಜೆ 5-00 ಗಂಟೆಗೆ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಿದೆ. ‘ಮಾದರಿ ಮೈಸೂರು ರಾಜ್ಯ’ವನ್ನು ರೂಪಿಸಿದ ನಾಲ್ವಡಿಯವರ ಆಳ್ವಿಕೆಯಲ್ಲಿ ಕಲೆ, ಸಂಸ್ಕೃತಿಗೆ ವಿಶೇಷ ಮನ್ನಣೆಗಳು ದೊರಕಿದವು. ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಿದ ಅವರು ಮಿಲ್ಲರ್ ಆಯೋಗದ ಮೂಲಕ ಮೀಸಲಾತಿಯನ್ನು ಜಾರಿಗೆ ತಂದು ‘ಸಾಮಾಜಿಕ ಕಾನೂನು’ಗಳ ಹರಿಕಾರ ಎನ್ನಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಅವರ ಕಾಲದಲ್ಲಿಯೇ ಸ್ಥಾಪಿತವಾಯಿತು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಅವರು ಸ್ಥಾಪಿಸಿರುವ ಸಂಸ್ಥೆಗಳ ಪಟ್ಟಿ ಬಹಳ ದೊಡ್ಡದಾಗಿದೆ. ಪರಿವರ್ತನೆಯ ಹರಿಕಾರರಾದ ನಾಲ್ವಡಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸಲಿದ್ದು, ಸಾಮಾಜಿಕ ಇತಿಹಾಸಕಾರರಾದ ಶ್ರೀ ಧರ್ಮೇಂದ್ರ ಕುಮಾರ್ ಅವರು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದು, ಹಿರಿಯ ವಿಜ್ಞಾನ ಬರಹಗಾರರೂ ಮತ್ತು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಕುರಿತು ವಿಶೇಷ ಅಧ್ಯಯನ ಮಾಡಿದವರೂ ಆದ ಡಾ. ಟಿ.ಆರ್. ಅನಂತರಾಮು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.