ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 31-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ವಿಶ್ವವ್ಯಾಪಕವಾಗಿರುವ ಹಾಗೂ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಸಾವಿರ ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಯಕ್ಷಗಾನವನ್ನು ನಮ್ಮ ಮುಂದಿನ ಪೀಳಿಗೆಗೆ ಸಕಾರಾತ್ಮಕವಾಗಿ ತಲಪಿಸೋಣ.” ಎಂದು ಶುಭ ಹಾರೈಸಿದರು.
ಯಕ್ಷಗಾನ ಭಾಗವತ ಹಾಗೂ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವಿಸಿದರು. ಕಲಾವಿದ ಡಾ. ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಹವ್ಯಾಸಿ ಭಾಗವತ ದೇವಿ ಪ್ರಕಾಶ್ ರಾವ್ ಕಟೀಲ್ ಇವರನ್ನು ಗೌರವಿಸಲಾಯಿತು. ಕೃಪಾ ಖಾರ್ವಿ ಹಾಗೂ ಶೋಭಾ ಪೇಜಾವರ ಸನ್ಮಾನ ಪತ್ರ ವಾಚಿಸಿದರು. ಕೇಶವ ಹೆಗ್ಡೆ, ಡಾ. ಪ್ರಖ್ಯಾತ್ ಶೆಟ್ಟಿ, ಮಾಧವ ನಾವಡ, ವೇದ ಮೂರ್ತಿ ಡಿ. ವಿ. ರಮೇಶ್ ತಂತ್ರಿ, ಲಿಖಿತಾ, ಧೃಶಾಲ್, ಪ್ರತೀಕ್ ರಾವ್, ಕಾವ್ಯಾ ಹಾಗೂ ಕೃತಿ ಉಪಸ್ಥಿತರಿದ್ದರು.
ಸುಧಾಕರ ರಾವ್ ಪೇಜಾವರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ಸಂಸ್ಥೆಯ ಅಧ್ಯಕ್ಷ ವರ್ಕಾಡಿ ಮಧುಸೂದನ ಅಲೆವೂರಾಯ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.