ಕಿನ್ನಿಗೋಳಿ : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ ಇದರ ವತಿಯಿಂದ ಕಿನ್ನಿಗೋಳಿಯಲ್ಲಿನ ಕಲಾವಿದರ ಮನೆ ಉದಯಗಿರಿಯಲ್ಲಿ ದಿನಾಂಕ 4 ಅಕ್ಟೋಬರ್ 2024ರಂದು ಕಲಾವಿದರ ಯಕ್ಷ ಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ ಸರಣಿ – 6ರ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಇವರು “ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನ ಮಹತ್ವಪೂರ್ಣವಾದುದು. ರಂಗಸ್ಥಳದಲ್ಲಿ ಭಾಗವತರು ಪ್ರಧಾನವಾದರೆ, ಚೌಕಿಯಲ್ಲಿ ಹಾಸ್ಯಗಾರನಿಗೇ ಜವಾಬ್ದಾರಿ. ಅದಕ್ಕೆ ಅವನಿಗೆ ಪ್ರತ್ಯೇಕ ಸ್ಥಾನ. ಆತ ಎಲ್ಲರ ಆಗುಹೋಗುಗಳಿಗೂ ಅನುಕೂಲಕರನಾಗಿ ರಂಗ ಖಾಲಿ ಬೀಳದಂತೆ ನೋಡುವ ಜವಾಬ್ದಾರಿ ಹೊಂದಿರುತ್ತಾನೆ. ಹಾಸ್ಯ ಎಂದರೆ ಜನರಿಗೆ ಬೇಕಾದ್ದನ್ನು ನೀಡುವುದಲ್ಲ. ಜನರ ಮನೋಧರ್ಮವನ್ನು ರೂಪಿಸುವ ಕೆಲಸ. ಆದ್ದರಿಂದ ಹಾಸ್ಯದ ಹೆಸರಲ್ಲಿ ಬಂಡು ಮಾತು ಬೇಡ. ಗಂಭೀರ ಹಾಸ್ಯದಲ್ಲಿಯೇ ಜನರನ್ನು ನಗಿಸಿ ರಸಾಸ್ವಾದನೆಯನ್ನು ಮಾಡಿಸಬಹುದು. ಸೀನು ಸೀನರಿಯ ಯಕ್ಷಗಾನದ ಕಾಲದಲ್ಲಿ ಹಾಸ್ಯ ಪಾತ್ರಧಾರಿಯಾಗಿ ಪ್ರವೇಶಿಸಿದ ಬಳಿಕ ಶಿಮಂತೂರು ನಾರಾಯಣ ಶೆಟ್ಟಿ ಮತ್ತು ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಿಂದ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು. ತೆಂಕು- ಬಡಗು ಎರಡೂ ತಿಟ್ಟುಗಳಲ್ಲಿಯೂ ಹಾಸ್ಯ ಪಾತ್ರದಲ್ಲಿ ವಿಪುಲ ಅವಕಾಶ ದೊರೆಯಿತು. ಹಾಸ್ಯ ಕಲಾವಿದನಿಗೆ ತೆಂಕುತಿಟ್ಟಿನಲ್ಲಿ ಸ್ವಾತಂತ್ರ್ಯ ಹೆಚ್ಚು. ಬಡಗಲ್ಲಿ ಶಿಸ್ತು ಹೆಚ್ಚು” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮಾತನಾಡಿ “ಮುಖ್ಯಪ್ರಾಣ ಕಿನ್ನಿಗೋಳಿಯವರು ಬಡತನದ ಹಿನ್ನೆಲೆಯಿಂದ ಬಂದವರು. 82ರ ಹಿರಿ ವಯಸ್ಸಿನಲ್ಲೂ ತಾಳಮದ್ದಳೆ ಯಕ್ಷಗಾನಗಳನ್ನು ನೋಡುವ ಆಸಕ್ತಿಯನ್ನು ಹೊಂದಿದ್ದಾರೆ. ಇದು ಹೊಸ ಕಲಾವಿದರಿಗೆ ಮಾರ್ಗದರ್ಶಿ. ಎಷ್ಟು ಗೌರವ ಬಂದರೂ ಅಹಂ ಇಲ್ಲದೇ ಕಲಾವಿದ ಹೇಗಿರಬಹುದೆಂಬುದಕ್ಕೆ ಇವರು ಮಾದರಿ” ಎಂದರು.
ವಿ.ವಿ. ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಮುಖ್ಯಪ್ರಾಣರು ಐದು ದಶಕಗಳ ತಿರುಗಾಟದ ಅನುಭವಿ. ಕಲಿತದ್ದು 5ನೇ ತರಗತಿಯಾದರೂ ಕಲಾವಿದರಾಗಿ ವಿ.ವಿ.ಯ ಸಂಶೋಧನೆಯ ಗಮನ ಸೆಳೆದಿದ್ದಾರೆ. ಕಂದರ, ವೃದ್ಧಭೂಸುರ, ಚಂದಗೋಪ, ವಿಜಯ, ಬಾಹುಕ, ಸಂಜಯ, ದೇವಿಮಹಾತ್ಮೆಯ ಚಾರಕ ಮೊದಲಾದ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವತುಂಬಿರುವ ಇವರು ಕಟೀಲು, ಸಾಲಿಗ್ರಾಮ, ಮಂತ್ರಾಲಯ, ಮಂದಾರ್ತಿ, ಇರಾ, ಪೆರ್ಡೂರು, ಸುಬ್ರಹ್ಮಣ್ಯ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಯಕ್ಷಗಾನದ ರಾಜಹಾಸ್ಯದ ಪರಂಪರೆಯಲ್ಲಿ ಮುಖ್ಯಪ್ರಾಣರದು ಮಹತ್ವದ ಹೆಸರು” ಎಂದರು.
ಇದೇ ಸಂದರ್ಭದಲ್ಲಿ ಯಕ್ಷಪಯಣದ ಅನುಭವವನ್ನು ಹಂಚಿಕೊಂಡ ಮುಖ್ಯಪ್ರಾಣ ಕಿನ್ನಿಗೋಳಿಯವರನ್ನು ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಯಿತು. ಕಿನ್ನಿಗೋಳಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕೆಲೆಂಜೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ. ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ ಎಸ್. ರಾವ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ., ರತ್ನಾಕರವರ್ಣಿ ಪೀಠದ ಸಂಶೋಧಕ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.