ರಾಗಧನ ಸಂಸ್ಥೆಯ ಆಶಯದಲ್ಲಿ ‘ರಾಗರತ್ನಮಾಲಿಕೆ -42’ಯಲ್ಲಿ ಕುಮಾರಿ ಧನಶ್ರೀ ಶಬರಾಯ ಇವರ ವಯೊಲಿನ್ ಸೋಲೋ ಹಾಗೂ ಪೂಜಾ ಉಡುಪ ಇವರ ಹಾಡುಗಾರಿಕೆಯು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯಿತು.
ಪಿಸಿರಿಲ್ಲದ ಶುದ್ಧವಾದ ಬಿಲ್ಲುಗಾರಿಕೆಯೊಂದಿಗೆ ಹೆಚ್ಚಿನ ಅನುಭವ ಪಡೆಯುತ್ತಿರುವ ಧನಶ್ರೀ ಒಳ್ಳೆಯ ಆತ್ಮವಿಶ್ವಾಸದಿಂದ ಸೋಲೋ ಕಚೇರಿ ನೀಡಿ ಭರವಸೆ ಮೂಡಿಸಿದರು. ಕಾನಡ ಅಟತಾಳ ವರ್ಣ, ಸಂಕ್ಷಿಪ್ತವಾದ ರಾಗ ಮತ್ತು ಸ್ವರ- ವಿಸ್ತಾರಗಳೊಂದಿಗೆ ನುಡಿಸಲಾದ ಶ್ರೀರಾಗ (ಶ್ರೀ ವರಲಕ್ಷ್ಮಿ) ಯದುಕುಲ ಕಾಂಬೋಜಿ (ಹೆಚ್ಚರಿಕಗಾ) ಕೃತಿಗಳು ಅತ್ಯುತ್ತಮವಾಗಿ ಮೂಡಿ ಬಂದವು. ಜಿಂಗ್ಲಾ (ಅನಾಥುಡನು) ಕೃತಿಯ ನಂತರ ಪ್ರಧಾನರಾಗವಾಗಿ ಪೂರ್ವಿ ಕಲ್ಯಾಣಿ (ಪರಮ ಪಾವನ) ಚೊಕ್ಕದಾದ ಆಲಾಪನೆ, ನೆರವಲ್ ಮತ್ತು ಸ್ವರವಿನಿಕೆಗಳು ಹಾಗೂ ಮುಕ್ತಾಯದೊಂದಿಗೆ ಸೊಗಸಾಗಿ ಮೂಡಿಬಂತು. ವಾಸಂತಿ ರಾಗದ ತಿಲ್ಲಾನದೊಂದಿಗೆ ಕಚೇರಿ ಯಶಸ್ವಿಯಾಗಿ ಕೊನೆಗೊಂಡಿತು. ಈ ವಾದನ ತಾಳ, ರಾಗ, ಕೃತಿ ವೈವಿಧ್ಯದೊಂದಿಗೆ ನೀಡಲಾಗಿತ್ತೆನ್ನುವುದು ಗಮನಾರ್ಹ! ಮೃದಂಗದಲ್ಲಿ ಹಿತವಾದ ಸಹವಾದನ ಹಾಗೂ ಪುಟ್ಟ ತನಿ ಆವರ್ತನ ನೀಡಿದ ಶ್ರೀ ಶುಭಾಂಗ್ ಪಿ.ಎಸ್. ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಂತರ ಪೂಜಾ ಉಡುಪ ಹಿಂದೋಳ ರಾಗದ ವರ್ಣದೊಂದಿಗೆ ಕಛೇರಿ ಪ್ರಾರಂಭಿಸಿ ಮುಂದೆ ಜಯಚಾಮರಾಜೇಂದ್ರ ಒಡೆಯರ್ ಅವರು ರಚಿಸಿದ ಅಪರೂಪದ ರಾಗ ದೂರ್ವಾಂಕಿ (ಗಂ ಗಣಪತೇ) ಬಹುದಾರಿ (ಬ್ರೋವಬಾರಮಾ) ನಳಿನಕಾಂತಿ (ಪಾಲಿಂತುಸದಾ) ಕೃತಿಗಳನ್ನು ಉತ್ತಮ ಸಂಗತಿಗಳೊಂದಿಗೆ ನಿರೂಪಿಸಿದರು. ಪ್ರಧಾನ ರಾಗಗಳು ಪಂತುವರಾಳಿ (ಶಂಕರಿ ನಿನ್ನೇ) ಮತ್ತು ಖರಹರಪ್ರಿಯ (ಜಾನಕೀಪತೇ), ಹೆಚ್ಚಾಗಿ ಪ್ರಚಲಿತದಲ್ಲಿ ಇಲ್ಲದ ಕೃತಿಗಳನ್ನೇ ಆಯ್ದುಕೊಂಡ ಗಾಯಕಿ ಒಳ್ಳೆಯ ರಾಗವಿಸ್ತಾರ, ನೆರವಲ್ ಮತ್ತು ಸ್ವರಪ್ರಸ್ತಾರಗಳೊಂದಿಗೆ ಪ್ರಸ್ತುತಪಡಿಸಿದರು. ವಯೊಲಿನ್ ಸಹಕಾರ ನೀಡಿದ ಧನಶ್ರೀ ಶಬರಾಯ ಮತ್ತು ಹಿತವಾಗಿ ಮೃದಂಗದಲ್ಲಿ ಸಹಕರಿಸಿದ ಶುಭಾಂಗ್ ಪಿ.ಎಸ್. ಇವರು ಕಛೇರಿಗೆ ಹೆಚ್ಚಿನ ಕಳೆನೀಡುವಲ್ಲಿ ಸಹಕರಿಸಿದರು. ಶುಭಾಂಗ್ ಇವರ ತನಿ ಆವರ್ತನ ರಸಿಕರಿಗೆ ಮುದನೀಡಿತು.
ಕಛೇರಿಯ ಉತ್ತರಾರ್ಧದಲ್ಲಿ ಚಾರುಕೇಶಿ (ಸಾಮಾನ್ಯವಲ್ಲ) ರಾಗಮಾಲಿಕೆ (ಮಗನೆಂದಾಡಿಸಿದಳು) ದೇವರನಾಮಗಳು, ಬೆಹಾಗ್ (ಸಾರಮೈನ) ಸ್ವಾತಿ ತಿರುನಾಳ್ ಅವರ ರಚನೆ ಮತ್ತು ಹಂಸಾನಂದಿ ತಿಲ್ಲಾನ ಇವುಗಳು ಅತ್ಯಂತ ನವಿರಾಗಿ ಮೂಡಿಬಂದು ರಸಿಕರ ಮನಮುಟ್ಟಿದವು. ಸುರುಟಿರಾಗದ ಮಂಗಳದೊಂದಿಗೆ ಕಛೇರಿ ಸಮಾಪನಗೊಂಡಿತು.
– ಸರೋಜಾ ಆರ್. ಆಚಾರ್ಯ, ಉಡುಪಿ