ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಹಾಗೂ ತಮಟೆ ಪುಸ್ತಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಇವರ ಕವನ ಸಂಕಲನ ‘ಎಲ್ಲಾದರು ಹದವಿದ್ದರೆ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02 ಆಗಸ್ಟ್ 2026ರಂದು ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸಾಹಿತ್ಯದ ಸೊಗಡಿನ ನಡುವೆ ಅರ್ಥಪೂರ್ಣವಾಗಿ ನೆರವೇರಿತು.
ಖ್ಯಾತ ಬರಹಗಾರ್ತಿ ರೂಪ ಹಾಸನ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, “ಕವಿಗೆ ಮುಗ್ಧತೆ, ನಿರ್ದಿಷ್ಟತೆ ಮತ್ತು ಸಂವೇದನಾಶೀಲತೆ ಎಂಬ ಗುಣಗಳು ಸದಾ ಜೊತೆಯಾಗಿರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಎಲ್ಲಾದರು ಹದವಿದ್ದರೆ’ ಕೃತಿ ಕನ್ನಡ ಕಾವ್ಯಲೋಕಕ್ಕೆ ಮೌಲಿಕ ಕೊಡುಗೆಯಾಗಿದೆ. ಬದುಕಿನ ಸೂಕ್ಷ್ಮ ಅನುಭವಗಳನ್ನು ಕಾವ್ಯದ ಮೂಲಕ ಮನಮುಟ್ಟುವಂತೆ ಅಭಿವ್ಯಕ್ತಿಸುವ ಶಕ್ತಿ ಈ ಸಂಕಲನಕ್ಕಿದೆ” ಎಂದು ಅಭಿಪ್ರಾಯಪಟ್ಟರು.
ಕೃತಿಯನ್ನು ಪರಿಚಯಿಸಿ ಮಾತನಾಡಿದ ಡಾ. ಎಚ್. ಉಮಾಶಂಕರ್, “ಆಧುನಿಕ ದಲಿತ ಕಾವ್ಯದ ಆಶಯಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕವಯತ್ರಿ ಸಮಸಮಾಜದ ಕನಸನ್ನು ಹೊಸ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರಬುದ್ಧತೆ, ಪಕ್ವತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಪ್ರೀತಿಯ ಹೊಸ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಅನಾವರಣಗೊಳಿಸಿದ್ದಾರೆ. ಸಮಕಾಲೀನ ಬದುಕಿನ ತಲ್ಲಣ, ಸಾಮಾಜಿಕ ಅಸಮಾನತೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಈ ಕೃತಿ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿರಂತರ ಫೌಂಡೇಶನ್‌ನ ಕಾರ್ಯದರ್ಶಿ ಪ್ರಸಾದ್ ಕುಂದೂರು, ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ಸುಗುಣ, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ತಮಟೆ ಪ್ರಕಾಶನದ ಹುಲಿಕುಂಟೆ ಮೂರ್ತಿ, ಕವಯತ್ರಿ ಸಂಘಮಿತ್ರೆ ನಾಗರಘಟ್ಟ, ಮಂಜುಳ ಕಿರುಗಾವಲು, ಧನಂಜಯ ಎಲಿಯೂರು, ಪತ್ರಕರ್ತ ಸ್ವಾಮಿ ಆನಂದ್, ಗಾಯಕ ದೇವಾನಂದ್ ವರಪ್ರಸಾದ್, ಕವಿ ಆಲೂರು ದೊಡ್ಡನಿಂಗಪ್ಪ, ವಿಕಾಸ್ ಮೌರ್ಯ, ಶೈಲಜ ನಾಗರಘಟ್ಟ, ರಾಜೇಶ್ ಹೆಬ್ಬಾರ್, ಅಭಿರುಚಿ ಗಣೇಶ್, ಪಲ್ಲವಿ ಟಿ.ಎಸ್., ಪ್ರೊ. ಕಾಳೇಗೌಡ ನಾಗವಾರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ಕವಿಗಳು, ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ಪುಸ್ತಕ ಪ್ರೇಮಿಗಳು ಉಪಸ್ಥಿತರಿದ್ದರು. ಕಾವ್ಯ, ಚಿಂತನೆ ಮತ್ತು ಸಾಹಿತ್ಯ ಸಂವಾದಗಳ ಸಂಗಮವಾಗಿ ಮೂಡಿಬಂದ ಈ ಕಾರ್ಯಕ್ರಮವು ಸಾಹಿತ್ಯಾಸಕ್ತರಿಗೆ ಚಿಂತನಾತ್ಮಕ ಅನುಭವವನ್ನು ನೀಡುವುದರೊಂದಿಗೆ, ಸಮಕಾಲೀನ ಕನ್ನಡ ಕಾವ್ಯಕ್ಕೆ ಹೊಸ ಧ್ವನಿಯೊಂದನ್ನು ಆತ್ಮೀಯವಾಗಿ ಪರಿಚಯಿಸಿದ ಸ್ಮರಣೀಯ ಸಾಹಿತ್ಯಿಕ ಸಮಾರಂಭವಾಗಿ ಗಮನ ಸೆಳೆಯಿತು.
