ಬೆಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2025-26ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ದಕ್ಷಿಣ ಕನ್ನಡ ಗಮಕಿ ಮಧೂರು ಮೋಹನ ಕಲ್ಲೂರಾಯ ಹಾಗೂ ಹಾಸನದ ಕಥಾ ಕೀರ್ತನ ಕಲಾವಿದ ಲೋಕೇಶ್ ದಾಸ್ ಅಯ್ಕೆಯಾಗಿದ್ದಾರೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ವಿಭಾಗಗಳಿಂದ 15 ಕಲಾವಿದರು ಹಾಗೂ ಒಂದು ಸಂಸ್ಥೆಯನ್ನು ‘ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ‘ಗೌರವ ಪ್ರಶಸ್ತಿ’ಯು ತಲಾ ರೂ. ಐವತ್ತು ಸಾವಿರ ಹಾಗೂ ‘ವಾರ್ಷಿಕ ಪ್ರಶಸ್ತಿ’ಯು ತಲಾ ರೂ. ಇಪ್ಪತ್ತೈದು ಸಾವಿರ ನಗದು ಬಹುಮಾನ ಹೊಂದಿದೆ.
ಕರ್ನಾಟಕ ಸಂಗೀತ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ. ವೆಂಕಟರಾಯ್ (ಡೋಲ್), ಕೋಲಾರದ ಎ.ವಿ. ವಿಶ್ವನಾಥ (ಹಾರ್ಮೋನಿಯಂ), ಮೈಸೂರಿನ ಹಂಸಿನಿ ನಾಗೇಂದ್ರ (ಗಾಯನ), ದಕ್ಷಿಣ ಕನ್ನಡದ ನಾಗೇಶ್ ಎ. ಬಪ್ಪನಾಡು (ನಾದಸ್ವರ), ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಧಾರವಾಡದ ಮೃತ್ಯುಂಜಯ ಶೆಟ್ಟರ್ (ಗಾಯನ), ಬಾಗಲಕೋಟೆಯ ರವೀಂದ್ರ ಸೊರಗಾವಿ (ಗಾಯನ), ಗದಗದ ಪಂಚಾಕ್ಷರಿ ಅಣ್ಣಿಗೇರಿ (ಹಾರ್ಮೋನೀಯಂ) ಹಾಗೂ ಬೀದರ್‌ನ ವಿಠ್ಠಲ್ ಸಿದ್ದಪ್ಪ ಪೂಜಾರಿ (ತಬಲಾ) ಇವರು ‘ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗದಲ್ಲಿ ಬಳ್ಳಾರಿಯ ಜಿಲಾನಿ ಭಾಷಾ’ (ಕೂಚಿಪುಡಿ), ಚಿತ್ರದುರ್ಗದ ಶಿವಪ್ರಕಾಶ (ಭರತನಾಟ್ಯ), ಧಾರವಾಡದ ನಾಗರತ್ನ ಹಡಗಲಿ (ಭರತನಾಟ್ಯ), ಸುಗಮ ಸಂಗೀತ ವಿಭಾಗದಲ್ಲಿ ಕೋಲಾರದ ಶ್ರೀಧರ್ ಅಯ್ಯರ್, ಕಥಾಕೀರ್ತನ ವಿಭಾಗದಲ್ಲಿ ಬೆಂಗಳೂರಿನ ಪಿ. ರಾಮಯ್ಯ (ತಬಲಾ), ಗಮಕ ವಿಭಾಗದಲ್ಲಿ ಧಾರವಾಡದ ವಿಶ್ವನಾಥ ಕುಲಕರ್ಣಿ (ವಾಚನ), ವಾದ್ಯ ತಯಾರಿಕೆಯಲ್ಲಿ ಬೆಂಗಳೂರಿನ ಕೃಷ್ಣಮೂರ್ತಿ ಇವರನ್ನು ಹಾಗೂ ಸಂಘ ಸಂಸ್ಥೆ ವಿಭಾಗದಲ್ಲಿ ಕೊಪ್ಪಳದ ಗಂಗಾವತಿಯ ಕೊಟ್ಟೊರೇಶ್ವರ ಸಂಗೀತ ವಿದ್ಯಾಲಯವನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ತಿಳಿಸಿದ್ದಾರೆ.
