ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ತುಳು ನಾಟಕ ಕಲಾವಿದರ ಒಕ್ಕೂಟದ 21ನೇ ವಾರ್ಷಿಕ ಸಂಭ್ರಮ, ‘ತೌಳವ ಪ್ರಶಸ್ತಿ’ ಪ್ರದಾನ ಸಮಾರಂಭ, ಹಿರಿಯ ಕಲಾವಿದರಿಗೆ ಸಮ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣಾ ಕಾರ್ಯಕ್ರಮವು 02 ಆಗಸ್ಟ್2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ “ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಲು ತುಳು ಎಲ್ಲ ರೀತಿಯ ಅರ್ಹತೆಗಳನ್ನು ಹೊಂದಿದೆ. ಹಾಗಾಗಿ ಅದನ್ನು ಕೇಳುವಲ್ಲಿ ಮತ್ತು ನೀಡುವಲ್ಲಿ ನ್ಯಾಯವಿದೆ. ತುಳುವನ್ನು ರಾಜ್ಯದ ಅಧಿಕೃತಭಾಷೆಯನ್ನಾಗಿ ಘೋಷಿಸುವುದಕ್ಕಾಗಿ ಸರಕಾರ ಕೇಳಿದಂತೆ ಎಲ್ಲ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಲಾಗಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಎರಡು, ಮೂರು ಮತ್ತು ಅದಕ್ಕಿಂತಲೂ ಹೆಚ್ಚಿನ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಘೋಷಿಸಲಾಗಿದೆ. ನಮ್ಮ ರಾಜ್ಯದಲ್ಲಿ ತುಳು ಶೀಘ್ರ ಅಧಿಕೃತ ರಾಜ್ಯ ಭಾಷೆಯಾಗಬೇಕಾಗಿದೆ. ಹಲವು ಹಂತಗಳನ್ನು ದಾಟಿ ಇಂದು ಶ್ರೀಮಂತವಾಗಿ ಬೆಳೆದಿರುವ ತುಳು ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳ ಕಲಾವಿದರು ತುಳುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.” ಎಂದು ಹೇಳಿದರು.


2020-21ನೇ ಸಾಲಿನ ‘ತೌಳವ ಪ್ರಶಸ್ತಿ’ಯನ್ನು ಬಿ. ಭೋಜ ಸುವರ್ಣ, 2021-22ನೇ ಸಾಲಿನ ಪ್ರಶಸ್ತಿಯನ್ನು ಪ್ರಭಾಕರ್ ಕಲ್ಯಾಣಿ ಪೆರ್ಡೂರು, 2022-23ನೇ ಸಾಲಿನ ಪ್ರಶಸ್ತಿಯನ್ನು ಪರಮಾನಂದ ಸಾಲ್ಯಾನ್ ಹಾಗೂ 2023-24ನೇ ಸಾಲಿನ ಪ್ರಶಸ್ತಿಯನ್ನು ಜಯಶೀಲ ಮರೋಳಿ ಇವರಿಗೆ ಪ್ರದಾನ ಮಾಡಲಾಯಿತು.
ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ, ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಕಾಪಿಕಾಡ್, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು. ವಿಶ್ರಾಂತ ಪ್ರಾಂಶುಪಾಲ ಬಾಬು ದೇವಾಡಿಗ, ಉದ್ಯಮಿಗಳಾದ ಗಿರೀಶ್ ಎಂ. ಶೆಟ್ಟಿ, ಲಂಚುಲಾಲ್, ಸಂತೋಷ್ ಪೂಂಜಾ, ರಾಜೇಶ್ ಶೆಟ್ಟಿ, ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ಇದರ ಅಸೋಸಿಯೇಟ್ ಕ್ಯಾಬಿನೆಟ್ ಸೆಕ್ರೆಟರಿ ಹಾಗೂ ಕೋಶಾಧಿಕಾರಿಯಾದ ಮೋಹನ್ ಕೊಪ್ಪಲ ಕದ್ರಿ, ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.



ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ ಇವರು ಕೀರ್ತಿಶೇಷರಾದ ಸೀತಾರಾಮ ಕುಲಾಲ್, ರತ್ನಾಕರ ರಾವ್ ಕಾವೂರು, ಧನಂಜಯ ಕೊಲ್ಯ, ಮಾಧವ ಜಪ್ಪು ಪಟ್ಣ ಅವರ ಸ್ಮರಣೆ ಮಾಡಿದರು. ವಿಮರ್ಶಕ ತಮ್ಮ ಲಕ್ಷ್ಮಣ ಇವರು ಕೀರ್ತಿಶೇಷರಾದ ಹಿರಿಯ ಕಲಾವಿದರ ಪರಿಚಯ ಮಾಡಿದರು.