ಕಾಸರಗೋಡು : ‘ಒಳ್ಳೆಯ ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದರಿಂದ ಮನಸ್ಸಿನ ಕಲ್ಮಶವು ದೂರವಾಗುತ್ತದೆ ಎಂದು ಖ್ಯಾತ ಉದ್ಯಮಿ ಕೆ. ಮುರಳೀಧರ್ ಭಟ್ ಅವರು ಹೇಳಿದರು.

ಅವರು ಕಾಸರಗೋಡಿನ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ನೇತೃತ್ವದ ಸ್ವರಚಿನ್ನಾರಿ ಸಂಗೀತ ಘಟಕ ಏರ್ಪಡಿಸಿದ ‘ಅಂತರಧ್ವನಿ – 14’ರ ಕಾರ್ಯಕ್ರಮವನ್ನು ಪದ್ಮಗಿರಿ ಕಲಾ ಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.


ಹಾಡಿನ ಸ್ಥಿರತೆ ಮತ್ತು ಸೌಂದರ್ಯವನ್ನು ಕಾಪಾಡುವ ಶಬ್ದದ ಮೂಲ ತಳಹದಿಯೇ ಶ್ರುತಿ – ಅದನ್ನು ಗಟ್ಟಿಯಾಗಿ ಅಭ್ಯಾಸ ಮಾಡಿಕೊಂಡರೆ ಕಲಾವಿದ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದರು.



ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಕಲಾವಿದೆ ಅಕ್ಷತಾ ಎಂ.ಎ. ಮಾತನಾಡಿ ಕಳೆದ ಎರಡು ದಶಕಗಳಿಂದ ಕಾಸರಗೋಡಿನಲ್ಲಿ ನಾಡು – ನುಡಿ – ಸಂಸ್ಕೃತಿಗಾಗಿ ತೊಡಗಿಸಿಕೊಂಡಿರುವ ರಂಗಚಿನ್ನಾರಿ ಸಂಸ್ಥೆಯ ಯುವ ಕಲಾವಿದರಿಗೆ ಮಹಿಳೆಯರಿಗೆ, ಗಾಯಕರಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟದ್ದನ್ನು ಶ್ಲಾಘಿಸಿ ಮತ್ತಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಶ್ರಮಿಸಬೇಕು ಎಂದರು.



ಕುಮಾರಿ ಕೀರ್ತನಾ ಭಟ್ ಪಾರ್ಥನೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


ರಂಗಚಿನ್ನಾರಿ ಟ್ರಸ್ಟ್ ಗೆ ಕಾಸರಗೋಡಿನ ನೋಟರಿ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಖ್ಯಾತ ವೈದ್ಯರೂ ಗಾಯಕರೂ ಆಗಿರುವ ಡಾ. ಸಂತೋಷ ಕಾಮತ್ ಅವರನ್ನು ಸೇರಿಸಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ, ನಿರ್ದೇಶಕ ಸತ್ಯನಾರಾಯಣ ಕೆ., ಎ.ಎನ್. ಅಶೋಕ ಕುಮಾರ್ ವೇದಿಕೆಯಲ್ಲಿದ್ದರು.



ಸಮಾರೋಪ ಸಮಾರಂಭದಲ್ಲಿ ಸಾಹಿತಿ ವೈ. ಸತ್ಯನಾರಾಯಣ ಅವರು ತಾವು ರಚಿಸಿದ ‘ನಿಮಗೂ ಧನ್ಯವಾದ’ ಎಂಬ ಪುಸ್ತಕವನ್ನು ಎಲ್ಲಾ ಗಾಯಕ – ಗಾಯಕಿಯರಿಗೆ ನೀಡಿ ಶುಭ ಹಾರೈಸಿದರು. ಕಾಸರಗೋಡಿನ ಹಿರಿಯ ವೈದ್ಯರೂ, ಸ್ವತಃ ಗಾಯಕರೂ ಆಗಿರುವ ಡಾ. ಕೆ.ಕೆ. ಶ್ಯಾನುಭೋಗ್ ರವರು ಕಾಸರಗೋಡಿನ ಗಾಯಕ – ಗಾಯಕಿಯರಿಗೆ ಮುಕ್ತ ವೇದಿಕೆಯನ್ನು ನಿರ್ಮಿಸಿಕೊಟ್ಟ ರಂಗಚಿನ್ನಾರಿ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ. ಸತೀಶ್ಚಂದ್ರ ಭಂಡಾರಿ ಉಷಾ ಟೀಚರ್, ಬಬಿತಾ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಜನಾರ್ದನ ಅಣಂಗೂರ್ ರವರು ಧ್ಯನವಾದವಿತ್ತರು. ಸುಮಾರು ಅರುವತ್ತು ಗಾಯಕ – ಗಾಯಕಿಯರು ವಿವಿಧ ಭಾಷೆಯ ಹಾಡುಗಳನ್ನು ಹಾಡಿ ರಂಜಿಸಿದರು.



