ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಇವರ ವತಿಯಿಂದ ಆರ್ಯರ ಎಂಬತ್ತನೆಯ ಹುಟ್ಟುಹಬ್ಬದ ನೆನಪಿಗಾಗಿ ‘ಆರ್ಯ ನೆನಪು’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಮತ್ತು ಚಿಂತಕ ಜಿ.ಸಿ. ತಲ್ಲೂರ ಮಾತನಾಡಿ “ಸನ್ಯಾಸತ್ವ ತ್ಯಜಿಸಿ ಧಾರವಾಡಕ್ಕೆ ಬಂದು ನೆಲೆಸಿ ಆರ್ಯರು ಸಾಹಿತ್ಯ, ಚಿತ್ರಕಲೆ, ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ಅನುವಾದ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧಿಸಿದ ಸಾಧನೆ ಊಹಾತೀತ. ಅವರ ನಾಟಕಗಳು, ಕಥೆಗಳು, ಕವನಗಳು, ಕಾದಂಬರಿ ಹೀಗೆ ವಿವಿಧ ಬಗೆಯ ಎಲ್ಲ ಬರಹಗಳನ್ನು ಸಮಗ್ರವಾಗಿ ಹೊರತರಬೇಕು. ಮನೋಹರ ಗ್ರಂಥಮಾಲೆ ಈ ಕೆಲಸ ಮಾಡಲಿ. ಅದಕ್ಕೆ ನಾವೆಲ್ಲರೂ ಗ್ರಂಥಮಾಲೆ ಜತೆ ಕೈ ಜೋಡಿಸೋಣ. ಹಾಗೆಯೇ ಅವರ ಚಿತ್ರಕಲೆ, ಸಾಹಿತ್ಯ ಕುರಿತು ವಿಮರ್ಶೆ ಹೊರಬರಬೇಕು. ಸಂವಾದ ಗೋಷ್ಠಿ ಏರ್ಪಾಡಾಗಬೇಕು. ಅವರಿಗೆ ಯಥೋಚಿತ ಗೌರವ ಸಿಗಬೇಕು” ಎಂದು ಹೇಳಿದರು.
ಮತ್ತೋರ್ವ ಅತಿಥಿಯಾಗಿದ್ದ ಆನಂದ ನಿಲೇಕಣಿ ಮಾತನಾಡುತ್ತಾ “ಆರ್ಯರ ಬದುಕು ಬಹುದೊಡ್ಡ ಆದರ್ಶದಿಂದ ಕೂಡಿತ್ತು. ಸದಾ ಹಸನ್ಮುಖಿಯಾಗಿದ್ದ ಆರ್ಯರು ಯಾವಾಗಲೂ ಇತರರ ವಿಷಯದಲ್ಲಿ ತೋರುತ್ತಿದ್ದ ಆದರ ಈಗಲೂ ಕಣ್ಣಿಗೆ ಕಟ್ಟಿದೆ. ವಿಶೇಷವಾಗಿ ಅವರು ತಮ್ಮ ಶ್ರೀಮತಿ ವಿದ್ಯಾ ಅಂದರೆ ನನ್ನ ಅಕ್ಕ ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರು ತೋರಿದ ಪ್ರೀತಿ, ಸ್ನೇಹ ಎಂದೂ ಮರೆಯಲಾಗದಂತಹದು. ಎಂದೂ ಯಾರಿಂದಲೂ ಏನನ್ನೂ ಬಯಸಲಿಲ್ಲ. ಬಹುದೊಡ್ಡ ಬರಹಗಾರ, ಕಲಾವಿದ, ಚಿಂತಕರಾಗಿದ್ದರೂ ಸಾಮಾನ್ಯರ ಜತೆ ಸಾಮಾನ್ಯನಾಗಿ ಬದುಕಿದರು. ಮನೋಹರ ಗ್ರಂಥಮಾಲೆ ಇಂದು ಅವರ 80ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವ ಈ ಸಭೆ ಆಯೋಜಿಸಿದ್ದಕ್ಕೆ ಮನದಾಳದ ಕೃತಜ್ಞತೆಗಳು” ಎಂದು ಹೇಳಿದರು ಮತ್ತು 80ರ ಹುಟ್ಟುಹಬ್ಬದ ನಿಮಿತ್ತ ಮುಂದಿನ ದಿನಗಳಲ್ಲಿ ಆರ್ಯರ ಸಾಹಿತ್ಯ, ಚಿತ್ರಕಲೆ ಕುರಿತು ಸಂವಾದ, ವಿಮರ್ಶೆ ಗೋಷ್ಠಿ, ಚರ್ಚಾಗೋಷ್ಠಿ ನಡೆಸುವುದಿದ್ದಲ್ಲಿ ತಾವು ಮತ್ತು ತಮ್ಮ ಕುಟುಂಬದ ಪರವಾಗಿ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಶಶಿಧರ ನರೇಂದ್ರ, ಲೋಹಿತ ನಾಯ್ಕರ, ವಿಶ್ವನಾಥ ಕೋಳಿವಾಡ, ವಿನಾಯಕ ನಾಯಿಕ, ಕೃಷ್ಣ ಕಟ್ಟಿ, ರಾಜಶೇಖರ ಜಾಡರ, ಶಿವಶಂಕರ ಹಿರೇಮಠ ಮತ್ತು ಹರ್ಷ ಡಂಬಳ ಮಾತನಾಡಿ ಆರ್ಯರ ಬಹುಮುಖ ಪ್ರತಿಭೆಯ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡರು. ಜಿ.ಸಿ. ತಲ್ಲೂರರ ಪ್ರಧಾನ ಸಂಪಾದಕತ್ವದಲ್ಲಿ ಆರ್ಯರ ಸಮಗ್ರ ಸಾಹಿತ್ಯ ಹೊರಬರಲಿ ಎಂದು ಎಲ್ಲರೂ ಅಪೇಕ್ಷೆ ಪಟ್ಟರು. ಶರಭೇಂದ್ರ ಸ್ವಾಮಿ, ಶ್ರೀದೇವಿ ಜೋಶಿ, ವಿಷಯಾ ಜೇವೂರ, ಸಮೀರ ಜೋಶಿ ಮೊದಲಾದವರು ಉಪಸ್ಥಿತರಿದ್ದರು. ಹ. ವೆಂ. ಕಾಖಂಡಿಕಿ ಕಾರ್ಯಕ್ರಮ ನಿರ್ವಹಿಸಿದರು.
