ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿರುವ ಮೆಲ್ಬೋರ್ನ್ ನಗರದಲ್ಲಿ ಸ್ಥಾಪಿಸಲಾದ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ದಿನಾಂಕ 08-07-20223 ರಂದು ಲೋಕಾರ್ಪಣೆ ಮಾಡಿದರು.
“ಕನ್ನಡದ ಕಾರ್ಯಚಟುವಟಿಕೆಗಳನ್ನು ವಿದೇಶದಲ್ಲಿಯೂ ವಿಸ್ತರಿಸುತ್ತಿರುವ ಅನಿವಾಸಿ ಕನ್ನಡಿಗರ ಭಾಷಾ ಪ್ರೇಮ ಹಾಗೂ ನಾಡು ನುಡಿಯ ಮೇಲಿರುವ ಅಭಿಮಾನ ಈ ಕನ್ನಡ ಭವನವನ್ನು ನೋಡಿದಾಗ ಅರ್ಥವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿದೇಶದಲ್ಲಿ ಇರುವ ಕನ್ನಡ ಸಂಘಗಳನ್ನು ಪರಿಷತ್ತಿನ ಅಂಗ ಸಂಸ್ಥೆಯನ್ನಾಗಿಸಿಕೊಂಡು ವಿದೇಶದಲ್ಲಿಯೂ ಕನ್ನಡ ಕಟ್ಟುವ ಕಾಯಕಲ್ಪದಲ್ಲಿ ತೊಡಗಿಕೊಳ್ಳಲಿದೆ. ರಾಜ್ಯದಲ್ಲಿ ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲಿದೆ. ಅನಿವಾಸಿ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಕನ್ನಡದ ಸಂಘಟನೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ನಾಡು ನುಡಿಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಅದರಂತೆ ಇಲ್ಲಿನ ಕನ್ನಡಿಗರು ಪ್ರಪಂಚದಾದ್ಯಂತ ನಮ್ಮ ಭಾಷೆ, ಸಂಸ್ಕೃತಿಯ ಸೊಗಡನ್ನು ಕಾಪಾಡಿಕೊಳ್ಳುವಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ತಮ್ಮ ಉಪಜೀವನ ಕಟ್ಟಿಕೊಳ್ಳುವುದರ ಜೊತೆಗೆ ಇಲ್ಲಿಯ ಭಾಗವಾಗಿದ್ದಾರೆ. ಕಳೆದ 37ವರ್ಷ ಗಳಿಂದ ಸಮಾಜ ಸೇವೆ ಮಾಡುತ್ತಿರುವ ಮೆಲ್ಬೋರ್ನ್ ಕನ್ನಡ ಸಂಘವು ಕಳೆದ ಅನೇಕ ವರ್ಷಗಳಿಂದ ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸ್ವಂತ ಕಟ್ಟಡವನ್ನು ಒಳಗೊಂಡಿದ್ದು ಅದನ್ನು ಕನ್ನಡ ಕೆಲಸಗಳಿಗಾಗಿ ಅನಾವರಣ ಮಾಡಿರುವುದು ಹೆಮ್ಮೆಯ ಸಂಗತಿ” ಎಂದು ನಾಡೋಜ ಡಾ. ಮಹೇಶ ಜೋಶಿ ಬಣ್ಣಿಸಿದರು.
ಮೆಲ್ಬೋರ್ನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಬೆಂಗಳೂರು ಮಾತನಾಡಿ “ಕನ್ನಡಿಗರಿಂದ ನಿರ್ಮಾಣವಾದ ಈ ಕನ್ನಡ ಭವನವು ಕನ್ನಡಿಗರ ಅನಧಿಕೃತ ರಾಯಬಾರಿ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಅನಿವಾಸಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಮಹತ್ವದ ಕೆಲಸವನ್ನು ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ, ಕಲೆ ಜನಪದ ಮುಂದಿನ ಪೀಳಿಗೆಗೆ ತಿಳಿಸುವ ಹಿನ್ನೆಲೆಯಲ್ಲಿ ಕನ್ನಡ ಭವನ ಕಾರ್ಯಪ್ರವೃತ್ತವಾಗಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೆಲ್ಬೋರ್ನ್ ಫೆಡರಲ್ ಮೆಂಬರ್ ಕ್ಯಾಸೆಂಡ್ರಾ ರ‍್ನಾಡೋ, ಆಸ್ಟ್ರೇಲಿಯಾದ ಗೃಹ ಮತ್ತು ನಗರಾಭಿವೃದ್ಧಿ ಸಚಿವರಾದ ಕಾಲಿನ್ ಬ್ರೂಕ್ಸ್, ಮೆಲ್ಬೋರ್ನ್ ಕನ್ನಡ ಸಂಘದ ಉಪಾಧ್ಯಕ್ಷರಾದ ಶ್ರೀ ಗಂಗಾಧರ ಬೇವಿನಕೊಪ್ಪ, ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಶರ್ಮಾ ಹಾಗೂ ಮೆಲ್ಬೋರ್ನ್ ಕನ್ನಡ ಸಂಘದ ಸದಸ್ಯರು ಮತ್ತು ಆಸ್ಟ್ರೇಲಿಯಾದಲ್ಲಿ ಇರುವ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.