ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ, 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15 ಅಕ್ಟೋಬರ್ 2026ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಇವರು ಮಾತನಾಡಿ “ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಕಲಾಕೃತಿಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕಲೆಗೆ ಧ್ಯಾನಸ್ಥ ಮನಸ್ಥಿತಿ ಬೇಕು. ಅದಕ್ಕಾಗಿಯೇ ಅವರನ್ನು ಕಲಾ ತಪಸ್ವಿಗಳು ಎನ್ನುತ್ತೇವೆ. ಇಂತಹ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ. ಕನ್ನಡದ ಎಲ್ಲ ರಾಜ ಪರಂಪರೆಯೂ ಕಲಾವಿದರಿಗೆ ಗೌರವ ನೀಡಿದೆ. ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸರ್ಕಾರ ಕಲಾವಿದರನ್ನು ಗೌರವಿಸುತ್ತಿದೆ” ಎಂದು ಕರೆ ನೀಡಿದರು. ಆಡಳಿತಾಧಿಕಾರಿ ಕಿರಣ್ ಸಿಂಗ್, ಅಕಾಡೆಮಿಯ ಅಧ್ಯಕ್ಷ ಎಂ.ಸಿ. ರಮೇಶ್ ಮಾತನಾಡಿ, “ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಕಲಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ” ಎಂದು ವಿವರಿಸಿದರು.

ತಲಾ 50 ಸಾವಿರ ರುಪಾಯಿ ಬಹುಮಾನದೊಂದಿಗೆ ಮೈಸೂರಿನ ಕೆ. ರಾಘವೇಂದ್ರ, ಉತ್ತರ ಕನ್ನಡದ ಅರುಣ ಬಿಕ್ಕು ಗುಡಿಗಾರ ಸೇರಿದಂತೆ 10 ಕಲಾವಿದರಿಗೆ ಶಿಲ್ಪಶ್ರೀ ಗೌರವ ಪ್ರಶಸ್ತಿ, ತಲಾ 25 ಸಾವಿರ ಬಹುಮಾನದೊಂದಿಗೆ ತುಮಕೂರಿನ ಸಿ.ಪಿ. ವಿಶ್ವನಾಥ್ ಸೇರಿದಂತೆ 10 ಕಲಾವಿದರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಲಾ 25 ಸಾವಿರ ರೂ. ಬಹುಮಾನದೊಂದಿಗೆ 11 ಕಲಾವಿದರಿಗೆ 19ನೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಪ್ರಶಸ್ತಿ ನೀಡಿ ಗೌರವಿಸಲಾಯಿತು.



