ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಶಾಸನ ಶಾಸ್ತ್ರ ಡಿಪ್ಲೋಮಾ ತರಗತಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮ ದಿನಾಂಕ 27-07-2023 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡ ಸಾಹಿತ್ಯ, ಇತಿಹಾಸ, ಸೇರಿದಂತೆ ಭಾಷೆ ಮತ್ತು ಸಂಸ್ಕೃತಿಯ ಮೂಲ ತಿಳಿಯುವ ಅವಶ್ಯಕತೆ ಇದೆ. ಅವುಗಳೆಲ್ಲವೂ ದಾಖಲಾಗಿರುವುದು ನಮ್ಮಲ್ಲಿಯ ಶಾಸನಗಳಲ್ಲಿ. ಅದನ್ನು ಅರಿಯಲು ಕನ್ನಡ ಶಾಸನಗಳ ಅಧ್ಯಯನ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಶಾಸನಗಳ ಅಧ್ಯಯನ ಹಾಗೂ ಶೋಧ ಕಾರ್ಯಕ್ಕೆ ಪರಿಷತ್ತು ಹೆಚ್ಚಿನ ಒತ್ತು ನೀಡಲಿದೆ. ಕನ್ನಡದ ಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನದ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇತಿಹಾಸ ಸಂಶೋಧನೆಗೆ ಶಾಸನಗಳ ಅಧ್ಯಯನ ತುಂಬಾ ಅಗತ್ಯವಾಗಿದೆ. ಆದ್ದರಿಂದ ಶಾಸನ ಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಮುಂದುವರೆಯಲಿದ್ದಾರೆ ಎನ್ನುವ ಭರವಸೆ ಇದೆ.” ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೋಮಾ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಶ್ರೀ ಕೃಷ್ಣ ಖಾನಾಪೂರ ಅವರು “ಇಲ್ಲಿರುವ ಅಧ್ಯಾಪಕರೆಲ್ಲರೂ ಶಾಸನಗಳ ಹುಡುಕಾಟ ಮತ್ತು ಅಧ್ಯಯನಗಳಲ್ಲಿ ನಿರತರಾಗಿರುತ್ತಾರೆ. ಈ ಮಧ್ಯೆ ಆಸಕ್ತ ವಿದ್ಯಾರ್ಥಿಗಳಿಗೆ ಶಾಸನ ಲಿಪಿಗಳ ಬಗ್ಗೆ ಹಾಗೂ ಶಾಸನಗಳ ಬಗ್ಗೆ ಕೂಲಂಕಷವಾಗಿ ಮಾಹಿತಿ ನೀಡಿದ್ದಾರೆ. ಅವರು ಕೊಟ್ಟ ಜ್ಞಾನವನ್ನು ಮುಂದುವರೆಸಿಕೊಂಡು ಶಾಸನ ಅಧ್ಯಯನಗಳ ಮೂಲಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ನಾವೆಲ್ಲಾ ಮಾಡಲಿದ್ದೇವೆ.” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ನಂದಾ ಪ್ರಕಾಶ್, ಅಮರೇಶ, ರಂಗನಾಥ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು, ಶಾಸನ ಶಾಸ್ತ್ರದ ವಿದ್ಯಾಥಿಗಳು, ಶಾಸನ ಆಸಕ್ತರು ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಕಾಟೋಟಿಯವರು ಸ್ವಾಗತ ಗೀತೆಯನ್ನು ಹಾಡಿ, ವಿದ್ಯಾರ್ಥಿ ನಾಗರಾಜ ವಂದಿಸಿ, ‘ಮಧುರ ಮಧರ ವೀ ಮಂಜುಳ ಗಾನ’ ನಿರೂಪಕರಾಗಿದ್ದ ಕಿರಣ ಕುಮಾರ ಪಿ.ಎಲ್ ಇವರು ನಿರೂಪಿಸಿದರು.