ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ ಪೆರಡಾಲ ಮತ್ತು ಕಾಸರಗೋಡಿನ ಪೆರಡಾಲದ ನವಜೀವನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಖ್ಯಾತ ಸಾಹಿತಿ, ದಿವಂಗತ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮ ದಿನಾಚರಣೆಯನ್ನು ದಿನಾಂಕ 08-06-2024ರಂದು ಕೊಡಿಯಾಲಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ, ಕವಿತಾ ಕುಟೀರದ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಆರ್ಟ್ ಕೆನರಾ ಟ್ರಸ್ಟಿನ ಅಧ್ಯಕ್ಷ ಸುಭಾಸ್‌ಚಂದ್ರ ಬಸು, ನವಜೀವನ ಪ್ರೌಢಶಾಲೆಯ ದಿವಂಗತ ಕವಿಯ ಹಲವಾರು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕವಿ ಹಾಗೂ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಎನ್. ಸುಬ್ರಾಯ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಲಾವಿದ ಸೈಯದ್ ಆಸಿಫ್ ಅಲಿ ಅವರು ರಚಿಸಿದ ದಿವಂಗತ ಕವಿಯ ಆಯಿಲ್ ಆನ್ ಕ್ಯಾನ್ವಾಸ್ ಭಾವಚಿತ್ರವು ವೇದಿಕೆಯನ್ನು ಅಲಂಕರಿಸಿತು.
ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ ಹಾಗೂ ಕವಿತಾ ಕುಟೀರದ ಕಾರ್ಯದರ್ಶಿ ಡಾ. ಪ್ರಸನ್ನ ರೈ ಅವರಿಂದ ಕವಿಯ ಜನಪ್ರಿಯ ಕವನವೊಂದರ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಸಾಯಿಗೀತಾ ಹೆಗಡೆಯವರು ಕವಿಯ ಸಾಹಿತ್ಯ ಕೃತಿಗಳ ಕುರಿತು ಮಾತನಾಡಿದರು ಮತ್ತು ಅವರ ಕೆಲವು ಪ್ರಸಿದ್ಧ ಕವನಗಳನ್ನು ವಾಚಿಸಿದರು. ಕಳ್ಳಿಗೆ ತಾರಾನಾಥ ಶೆಟ್ಟಿ ಅವರು ಕವಿಯ ಸಾಮಾಜಿಕ ಪ್ರಭಾವವನ್ನು ನೆನಪಿಸಿದರು. “ಅವರು ಕರ್ನಾಟಕ ಸರ್ಕಾರದಿಂದ ಮಾತ್ರವಲ್ಲದೆ ಕೇರಳ ಸರ್ಕಾರದಿಂದ ಸಮಾನವಾಗಿ ಗೌರವಿಸಲ್ಪಟ್ಟರು. ಎಷ್ಟರಮಟ್ಟಿಗೆಂದರೆ ಕೇರಳ ಸರ್ಕಾರ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲು ಸಿದ್ಧರಾಗಿದ್ದರು” ಎಂದು ಹೇಳಿದರು.
ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ ದುರ್ಗಾಪ್ರಸಾದ್ ರೈ ಅವರು ಕವಿಯನ್ನು ಮನೆಯಲ್ಲಿ ತಂದೆಯಾಗಿ ನೆನಪಿಸಿಕೊಂಡು ತಮ್ಮ ಜೀವನವು ಹೇಗೆ ತಂದೆಯ ಆದರ್ಶಗಳಾದ ಸರಳತೆ ಮತ್ತು ಸಮಯಪಾಲನೆಯಿಂದ ಪ್ರಭಾವಿತವಾಗಿದೆ ಎಂದು ಸ್ಮರಿಸಿಕೊಂಡರು. ಕವಿ ಕಲಿಸಿದ ಪೆರಡಾಲದ ನವಜೀವನ ಪ್ರೌಢಶಾಲೆಯ ವಿದ್ಯಾರ್ಥಿ ಫ್ರಾನ್ಸಿಸ್ ಡಿ’ಸೋಜಾ ಅವರು ತಮ್ಮ ಶಿಕ್ಷಕರನ್ನು ಸ್ಮರಿಸಿ ಅವರ ಪ್ರೇರಣೆಯಿಂದ ಕನ್ನಡದಲ್ಲಿ ಆಸಕ್ತಿ ಬೆಳೆಸಿಕೊಂಡ ಬಗ್ಗೆ ತಿಳಿಸಿದರು. ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಅವರು ಕನ್ನಡ ಸಾಹಿತ್ಯದ ಮೇಲೆ ರೈ ಅವರ ಪ್ರಭಾವದ ಕುರಿತು ಮಾತನಾಡಿದರು.
ಕಾರ್ಯಕ್ರಮವು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದ ಲೇಖಕರ ಬರಹಗಳ ಸಂಕಲನ ‘ಐಕ್ಯವೇ ಮಂತ್ರ’ ಪುಸ್ತಕ ಬಿಡುಗಡೆಯ ಪೂರ್ವಸಿದ್ಧತಾ ಸಭೆಯನ್ನು ಒಳಗೊಂಡಿತ್ತು. ಆರ್ಟ್ ಕೆನರಾ ಟ್ರಸ್ಟ್ ನ ಕಾರ್ಯದರ್ಶಿ ನೇಮಿರಾಜ್ ಶೆಟ್ಟಿಯವರು ಆಗಸ್ಟ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆ ಮಾಡುವುದಾಗಿ ತಿಳಿಸಿದರು. “ಮಂಜೇಶ್ವರ ಗೋವಿಂದ ಪೈ, ಕೆ.ವಿ. ತಿರುಮಲೇಶ್, ಪೆರಡಾಲ ಕೃಷ್ಣಯ್ಯ, ಮತ್ತು ಸಾರಾ ಅಬೂಬಕರ್ ಇವರೊಂದಿಗೆ ತುಳುನಾಡಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರನ್ನು ಸ್ಮರಿಸುವ ಪುಸ್ತಕವನ್ನು ಸಂಪಾದಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಈ ಪುಸ್ತಕದೊಂದಿಗೆ ಹೆಚ್ಚಿನ ಓದುಗರನ್ನು ತಲುಪಲು ಮತ್ತು ಕವಿಯ ಕೃತಿಗಳನ್ನು ಸ್ಮರಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಹೇಳಿದರು. ಆರ್ಟ್ ಕೆನರಾ ಟ್ರಸ್ಟಿನ ಕೋಶಾಧಿಕಾರಿ ರಾಜೇಂದ್ರ ಕೇದಿಗೆ ವಂದಿಸಿದರು.