Subscribe to Updates

    Get the latest creative news from FooBar about art, design and business.

    What's Hot

    ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮಾಚರಣೆ

    July 28, 2026

    ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ

    July 28, 2026

    ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

    July 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ
    Birthday

    ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ

    July 28, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಜಗತ್ತಿನ ಶ್ರೇಷ್ಠ ಭಾವಕವಿಗಳಲ್ಲಿ ಒಬ್ಬರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇವರ ಮಗ ಡಾ. ದತ್ತಾತ್ರೇಯ ವಾಮನ ಬೇಂದ್ರೆ. ತಂದೆಯ ಸಾಹಿತ್ಯ ಮತ್ತು ಶ್ರೇಷ್ಠತೆಯ ಪ್ರಭಾವದಿಂದ ಹೊರಗೆ ಬಂದು ಸ್ವಂತಿಕೆಯ ಆತ್ಮಬಲದ ಮೇಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ‘ಸಂ.ವಾ.ದ’ ಇದು ತಂದೆ ವರ ಕವಿ ಅಂಬಿಕಾತನಯದತ್ತರು ವಾಮನ ಬೇಂದ್ರೆಯವರಿಗೆ ನೀಡಿದ ಕಾವ್ಯನಾಮ. ಕವಿ, ಲೇಖಕ, ಬಾನುಲಿ ನಾಟಕಕಾರ, ವಿಮರ್ಶಕ, ಭಾಷಾಂತರಕಾರರಾದ ಡಾ. ವಾಮನ ಬೇಂದ್ರೆಯವರಿಗೆ ಅಧ್ಯಯನ ಮತ್ತು ಅಧ್ಯಾಪನ ಒಂದು ತಪಸ್ಸಿನಂತೆ.

    ಅತ್ಯುತ್ತಮ ಪ್ರಾಧ್ಯಾಪಕರೂ ಮತ್ತು ಕನ್ನಡ ಸಾಹಿತ್ಯ – ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾದ ಡಾ. ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 28 ಜುಲೈ 1935ರಂದು ತಂದೆ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ತಾಯಿ ಲಕ್ಷ್ಮೀಬಾಯಿಯವರ ಸುಪುತ್ರನಾಗಿ ಜನಿಸಿದರು. ಇವರ ಪ್ರಾರಂಭಿಕ ಶಿಕ್ಷಣ ಗದಗದಲ್ಲಿ, ಕನ್ನಡವನ್ನು ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ಡಾ. ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ ಒಂದು ಅಧ್ಯಯನ’ ಮಹಾಪ್ರಬಂಧವನ್ನು ಮಂಡಿಸಿ ದೇವನೂರು ಸ್ವರ್ಣ ಪದಕದೊಂದಿಗೆ ಪಿ.ಎಚ್.ಡಿ. ಪದವಿಯನ್ನು ಪಡೆದರು. ಈ ಮಹಾಪ್ರಬಂಧವು ಒಂದು ಮಹತ್ವದ ಆಕರ ಗ್ರಂಥವಾಗಿದೆ.

    ವಾಮನ ಬೇಂದ್ರೆಯವರು ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಧಾರವಾಡದ ಬಾಸೆಲ್ ಮಿಷನ್ ನಡೆಸುವ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಅಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ 1993ರಲ್ಲಿ ವೃತ್ತಿ ಜೀವನದಿಂದ ನಿವೃತ್ತರಾದರು. ಸಾಹಿತ್ಯ ರಚನೆಯ ಕಲೆ ತಂದೆಯಿಂದಲೇ ಅವರಿಗೆ ಬಳುವಳಿಯಾಗಿ ಬಂದಿತ್ತೋ ಎಂಬಂತೆ ವಿದ್ಯಾರ್ಥಿ ಜೀವನದ ಎಳವೆಯಲ್ಲಿಯೇ ಇವರ ಬರವಣಿಗೆ ಪ್ರಾರಂಭವಾಯಿತು. ಇಂಟರ್ಮೀಡಿಯಟ್ ವಿದ್ಯಾರ್ಥಿಯಾಗಿರುವಾಗಲೇ ಸಮರ್ಥವಾಗಿ ಪ್ರಬಂಧ, ನಾಟಕ ರಚನೆಗಳನ್ನು ಮಾಡುತ್ತಿದ್ದರು. ಕನ್ನಡ, ಮರಾಠಿ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದ ಇವರು ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹ ಕರಗತ ಮಾಡಿಕೊಂಡಿದ್ದರು.

    ವಾಮನ ಬೇಂದ್ರೆಯವರ ಚೊಚ್ಚಲ ಕವನ ‘ಮೊದಲ ತೊದಲು’. ‘ಅನಂತಧಾರೆ’ ಮತ್ತು ‘ಸ್ಪಂದನ’ ಮತ್ತೆ ಪ್ರಕಟಗೊಂಡವುಗಳು. ‘ಸೊಂಡಿಲ ಗಣಪ್ಪಾ ಬಂದ’, ‘ಸ್ಪರ್ಶ’ ಇತ್ಯಾದಿ ಮಕ್ಕಳ ನಾಟಕಗಳೊಂದಿಗೆ ಸುಮಾರು ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆಯನ್ನು ಮಾಡಿದ್ದಾರೆ. ‘ಕಥಾಕುಶಲ ಕವಿ ಲಕ್ಷ್ಮೀಶ’, ‘ಕವಿ – ಕಾವ್ಯ ಪರಂಪರೆ’, ‘ಲಕ್ಷ್ಮೀಶ : ಒಂದು ಅಧ್ಯಯನ’, ‘ಬೇಂದ್ರೆ ಕಾವ್ಯ ಲೋಲಕ’, ‘ಬೇಂದ್ರೆ ಬೆಳಕು’ ಇತ್ಯಾದಿ ಇವರ ವಿಮರ್ಶಾ ಕೃತಿಗಳು. ‘ಕವಿ ಚೂತವನ ಚೈತ್ರ ಲಕ್ಷ್ಮೀಶ’, ‘ದ. ರಾ. ಬೇಂದ್ರೆ ಜೀವನ ಪರಿಚಯ’ ಇತ್ಯಾದಿ ವಾಮನ ಬೇಂದ್ರೆಯವರು ಬರೆದ ಜೀವನ ಚರಿತ್ರೆಗಳು. ‘ಕುಣಿಯೋಣ ಬಾರ’, ‘ಅಂಬಿಕಾತನಯ ಹಾಡs ಬೆಳದಿಂಗಳ ನೋಡs’, ‘ನೋಡ್ಯಾನs ದಶಾವತಾರ’, ‘ಅಂಬಿಕಾತನಯ ಹಾಡ್ಯಾನs’, ‘ಕನ್ನಡಕ್ಕೆ ಕಿಟೆಲ್ ಕೊಡುಗೆ’, ‘ನಾಳಿನ ಕನಸು’, ‘ಚೈತನ್ಯದ ಪೂಜೆ’, ‘ನಮನ’, ‘ದರ್ಶನ’, ‘ವಿಕಾಸ’, ‘ವಿನ್ಯಾಸ’, ‘ತತ್ವ’, ‘ಸಿದ್ಧಾಂತ’, ‘ಬೇಂದ್ರೆ ಋತುದರ್ಶನ’, ಬೇಂದ್ರೆಯವರ ಜೀವನ ಮಹಾಕಾವ್ಯ- ‘ಔದುಂಬರ ಗಾಥೆ’ ಮುಂತಾದವು ವಾಮನ ಬೇಂದ್ರೆಯವರು ಸಂಪಾದಿಸಿದ ಕೃತಿಗಳು. ‘ಗುರು ಗೋವಿಂದ ಸಿಂಗ’, ‘ಭಾರತೀಯ ಸಾಹಿತ್ಯ ಸಂಕಲನ’, ‘ಕಾಲಾಯ ತಸ್ಮೈನಮಃ’, ‘ನಟಸಾಮ್ರಾಟ’, ‘ಮಹಾರಾಷ್ಟ್ರದ ಜಾನಪದ ಸಾಹಿತ್ಯ’, ‘ಸಮರ್ಥ ರಾಮದಾಸ’ ಹಾಗೂ ‘ಸ್ವಾಮಿ ವಿವೇಕಾನಂದ’ ಇತ್ಯಾದಿ ವಾಮನ ಬೇಂದ್ರೆಯವರ ಭಾಷಾಂತರ ಕೃತಿಗಳು.

    ಇವರು ಕನ್ನಡಕ್ಕೆ ಅನುವಾದ ಮಾಡಿದ ಬಾಲಚಂದ್ರ ನೆಮಾಡೆ ಇವರ ಮರಾಠಿ ಭಾಷೆಯ ‘ಖೋಸಲಾ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದು ಇವರು ಭಾಷಾಂತರ ಮಾಡುವ ವೈಖರಿಗೆ ದೊರೆತ ಗೌರವ. ಕುಸುಮಾಗ್ರಜರ ‘ನಾಟಕ್ ನಟಸಾರ್ವಭೌಮ’ ಮತ್ತು ದ.ರಾ. ಬೇಂದ್ರೆಯವರ ಮರಾಠಿ ಕವನಸಂಗ್ರಹ ‘ಓಮಾಳ’ವನ್ನು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತಿ ಇವರದು. ವರಕವಿ ಅಂಬಿಕಾತನಯದತ್ತರ ಕಾವ್ಯದ ಅಭ್ಯಾಸವನ್ನು ಬಾಲ್ಯದಿಂದಲೇ ಮಾಡುತ್ತಾ ಬಂದವರು ವಾಮನ ಬೇಂದ್ರೆ. ‘ಬಾಲಬೋಧೆ’ ಎಂಬ ಕವನ ಸಂಗ್ರಹಕ್ಕೆ ಬರೆದ ಟಿಪ್ಪಣಿಗಳೇ ‘ನಿಕಷಕ್ಕೆ ಹಚ್ಚಿದ ಕೃತಿ’ ಎಂಬ ಶೀರ್ಷಿಕೆ ಇರುವ ವಾಮನ ಬೇಂದ್ರೆಯವರ ವಿಮರ್ಶಾ ಕೃತಿ. “‘ಬಾಲಬೋಧೆ’ ಕವನ ಸಂಕಲನದ ಕವಿತೆಗಳು ಅರ್ಥವಾಗಬೇಕಾದರೆ ಸಂಖ್ಯಾಶಾಸ್ತ್ರದಲ್ಲಿ ನೈಪುಣ್ಯತೆ ಪಡೆದಿರಬೇಕು, ತಂದೆಯ ಗರಡಿಯಲ್ಲಿ ಪಳಗಿದ ವಾಮನ ಬೇಂದ್ರೆ ಅವರಿಂದ ಮಾತ್ರ ಇದು ಸಾಧ್ಯ” ಎಂಬುದು ವಿಮರ್ಶಕರ ಅನಿಸಿಕೆ. ಬೇಂದ್ರೆಯವರ ‘ಒಲವೆ ನಮ್ಮ ಬದುಕು’ ಎಂಬುದು ಆಯ್ದ ಪ್ರಣಯ ಗೀತೆಗಳ ಸಂಕಲನ. ಈ ಕೃತಿಗೂ ವಾಮನ ಬೇಂದ್ರೆಯವರು ಟಿಪ್ಪಣಿಗಳನ್ನು ಬರೆದಿದ್ದಾರೆ. ‘ಶ್ರಾವಣ ಪ್ರತಿಭೆ’ ಬೇಂದ್ರೆಯವರ ಆಯ್ದ ನೂರು ಕವಿತೆಗಳ ಸಂಗ್ರಹ. 50 ಕವಿತೆಗಳಿಗೆ ಪ್ರಸಿದ್ಧ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರು ವಿಮರ್ಶೆ ಬರೆದರೆ, ಅತ್ಯಂತ ಕಠಿಣವಾದ ಉಳಿದ 50 ಕವಿತೆಗಳಿಗೆ ವಾಮನ ಬೇಂದ್ರೆಯವರು ವಿಮರ್ಶೆಯನ್ನು ಬರೆದಿದ್ದಾರೆ. ಬೇಂದ್ರೆಯವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ವಾಮನ ಬೇಂದ್ರೆಯವರ ಬರವಣಿಗೆಗಳು ಬಹಳ ಉಪಯುಕ್ತವಾಗುತ್ತವೆ.

    ಡಾ. ವಾಮನ ಬೇಂದ್ರೆಯವರ ‘ಸಮಗ್ರ ಗದ್ಯ ಸಂಪುಟ’ವು ‘ಬೇಂದ್ರೆ ಬೆಳಕು – ಬೆಂದಕಾಳು’, ‘ಮಿಂಚು ಕಥೆಗಳು’, ‘ಹರಟೆಗಳು’, ‘ಲೇಖನ ರಸಾಯನ’ ಮತ್ತು ‘ಬೇಂದ್ರೆ ಸೂಕ್ತಿಗಳು – ಅಮರ ಬೀಜಗಳು’ ಎಂಬ ಐದು ಭಾಗಗಳನ್ನು ಒಳಗೊಂಡ 400 ಪುಟಗಳ ವಿಶಿಷ್ಟವಾದ ಅನನ್ಯ ಕೃತಿ. ಮೊದಲನೆಯ ವಿಭಾಗದಲ್ಲಿ ದ ರಾ ಬೇಂದ್ರೆಯವರ ಕಾವ್ಯದ ರಸವಿಮರ್ಶೆಗಳಿರುವ 150 ಲೇಖನಗಳು ಮತ್ತು ಕೊನೆಯ ವಿಭಾಗದಲ್ಲಿ 151 ಬೇಂದ್ರೆ ಸೂಕ್ತಿಗಳು ಇವೆ . ಈ ಎರಡು ವಿಭಾಗಗಳಲ್ಲಿಯೂ ದ.ರಾ ಬೇಂದ್ರೆಯವರ ಕಾವ್ಯ, ಸಾಹಿತ್ಯ ಸೌಂದರ್ಯವು ಡಾ.ವಾಮನ ಬೇಂದ್ರೆಯವರ ಸಾಹಿತ್ಯ ಸೌಂದರ್ಯದಲ್ಲಿ ಮಿಂದು, ಪರಿಶುದ್ಧವಾಗಿ ಆಕರ್ಷಕ ರೀತಿಯಲ್ಲಿ ಹೊರಬಂದಿದೆ. ‘ಮಿಂಚು ಕಥೆಗಳು’ ‘ಹರಟೆಗಳು’ ಹಾಗೂ ‘ಲೇಖನ ರಸಾಯನ’ ವಿಭಾಗಗಳಲ್ಲಿರುವ ಲೇಖನಗಳಲ್ಲಿ ಡಾ. ವಾಮನ ಬೇಂದ್ರೆ ಅವರ ಸ್ವಂತ ಪ್ರತಿಭೆಯ ಅನಾವರಣವಾಗಿದೆ. ಇದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ.ವಾಮನ ಬೇಂದ್ರೆಯವರು ನೀಡಿರುವ ಅಮೂಲ್ಯ ಕೃತಿ. ಡಾ. ಕೆ.ಎಸ್. ಶರ್ಮ ಸಂಪಾದಿಸಿದ ಈ ಕೃತಿಯು ಡಾ. ವಾಮನ ಬೇಂದ್ರೆಯವರ ಸಹಸ್ರ ಚಂದ್ರದರ್ಶನದ ಸಂದರ್ಭದಲ್ಲಿ ದಿನಾಂಕ 11 ಆಗಸ್ಟ್ 2015ರಂದು ಲೋಕಾರ್ಪಣೆಗೊಂಡಿದೆ.

    ಪ್ರೀತಿಯ ‘ಬಾಳಣ್ಣ’ ವಾಮನ ಬೇಂದ್ರೆಯವರು ‘ಶ್ರೀ ಮಾತಾ’ ಕ್ಕೆ ಯಾರೇ ಅಭಿಮಾನಿಗಳು ಬಂದರೂ ಮಕ್ಕಳಿದ್ದರೆ ಪೆಪ್ಪರ್ಮೆಂಟು ದೊಡ್ಡವರಿಗೆ ಚಿಟ್ಟಿಕೆ ಸಕ್ಕರೆ ಮತ್ತು ಒಂದು ಲೋಟ ನೀರು ಹಿಡಿದು ಪ್ರೀತಿಯ ಸ್ವಾಗತವನ್ನು ನೀಡುವ ಒಂದು ವಿಶಿಷ್ಟವಾದ ಕ್ರಮವನ್ನು ಪಾಲಿಸುತ್ತಿದ್ದರು. ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೇವನೂರು ಸಮಿತಿಯ ‘ಸುವರ್ಣ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ರಾಜ್ಯ ಅಕಾಡೆಮಿ ಪ್ರಶಸ್ತಿ’, ‘ವಿದ್ಯಾರಣ್ಯ ಪ್ರಶಸ್ತಿ’, ‘ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ’, ‘ಪರಶುರಾಮ ಪ್ರಶಸ್ತಿ’, ‘ಕನ್ನಡ ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ’, ರಾಜ್ಯ ಸಾಹಿತ್ಯ ಅಕಾಡೆಮಿಯ ಸೃಜನೇತರ ಅನುವಾದ ಬಹುಮಾನ, ಕನ್ನಡ ಮರಾಠಿ ಭಾಷಾ ಬಾಂಧವ್ಯಕ್ಕಾಗಿ ಗಣನೀಯ ಸೇವೆ ಸಲ್ಲಿಸಿದವರಿಗೆ ಮುಂಬೈ ಕರ್ನಾಟಕ ಸಂಘದವರು ಕೊಡುವ ‘ಶ್ರೀ ವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ’ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆಯವರು 28 ಸೆಪ್ಟೆಂಬರ್ 2016ರಂದು ಕೊನೆಯುಸಿರೆಳೆದರು.

    ಸಾಹಿತ್ಯ ಕ್ಷೇತ್ರವನ್ನು ತಮ್ಮ ಸಾಹಿತ್ಯ ಪ್ರತಿಭೆಯಿಂದ ಶ್ರೀಮಂತಗೊಳಿಸಿದ ಡಾ. ವಾಮನ ದತ್ತಾತ್ರೇಯ ಬೇಂದ್ರೆಯವರ ಸಾಹಿತ್ಯ ಸೇವೆಯನ್ನು ಅವರ ಜನ್ಮದಿನವಾದ ಇಂದು ಸ್ಮರಿಸಿಕೊಳ್ಳೋಣ. ಅಗಲಿದ ಆತ್ಮಕ್ಕೆ ಅನಂತ ನಮನಗಳು.

    – ಅಕ್ಷರೀ

    baikady Birthday Literature roovari specialarticle
    Share. Facebook Twitter Pinterest LinkedIn Tumblr WhatsApp Email
    Previous Articleಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ
    Next Article ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮಾಚರಣೆ
    roovari

    Add Comment Cancel Reply


    Related Posts

    ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮಾಚರಣೆ

    July 28, 2026

    ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

    July 28, 2026

    ಸಾಧನ ಸಂಗಮದ ಅನುಪಮ ‘ನೃತ್ಯ ಸಮಾಗಮ’ 2026

    July 28, 2026

    ಡಾ. ಕೃಷ್ಣಪ್ರಸಾದ್ ಬಾಳಿಕೆ ಇವರ ‘ಕೆನಡಾ ಕಥನ’ ಲೇಖನ ಸಂಕಲನ ಲೋಕಾರ್ಪಣೆ

    July 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.