ಬೆಂಗಳೂರು : ಖ್ಯಾತ ನಾಟ್ಯಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಇವರು ನೃತ್ಯಕ್ಷೇತ್ರದಲ್ಲಿ ಮಾಡಿರುವ ಹಲವು ದಶಕಗಳ ಸಾಧನೆ ಅನುಪಮ. ಇವರ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯಸಂಸ್ಥೆಯು ನೃತ್ಯಕ್ಷೇತ್ರದಲ್ಲಿ ಸಾಧಿಸುತ್ತಿರುವ ಹೊಸ ಮೈಲಿಗಲ್ಲುಗಳ ಈವರೆಗಿನ ಸೃಜನಾತ್ಮಕ ಚಟುವಟಿಕೆಗಳು ಗಮನಾರ್ಹ. ಈ ನೃತ್ಯ ಶಾಲೆಯು ವರ್ಷ ಪೂರ್ತಿ ಒಂದಲ್ಲ ಒಂದು ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತದೆ, ಸದ್ದಿಲ್ಲದೆ ವಿಶಿಷ್ಟವಾಗಿ ಕಾರ್ಯೋನ್ಮುಖವಾಗಿರುವುದು ಸರ್ವ ವಿದಿತ. ಹೊಸದೇನನ್ನಾದರೂ ಸಾಧಿಸುವ ಪ್ರಯೋಗಾತ್ಮಕ ನಿಟ್ಟಿನಲ್ಲಿ ಪ್ರತಿವರ್ಷ ಗುರು ಡಾ. ಸಾಧನಶ್ರೀ ನವರೂಪಕಗಳನ್ನು ದಿಗ್ದರ್ಶಿಸಿ- ಸಂಯೋಜಿಸಿ ರಂಗದ ಮೇಲೆ ತರುವುದು ಪರಿಪಾಠ.

ಅದರಂತೆ ಯಶಸ್ವೀ ನಾಲ್ಕು ದಶಕಗಳನ್ನು ದಾಟಿರುವ ಖ್ಯಾತ ‘ಸಾಧನ ಸಂಗಮ ಡ್ಯಾನ್ಸ್ ಸೆಂಟರಿ’ನ ನಲವತ್ತನೆಯ ವಾರ್ಷಿಕೋತ್ಸವದ ಸಾರ್ಥಕ ಸಮಾರಂಭವು ದಿನಾಂಕ 01 ಆಗಸ್ಟ್ 2026ರಂದು ಶನಿವಾರ ಸಂಜೆ 5-00 ಗಂಟೆಗೆ ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನಲ್ಲಿ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಜರುಗಲಿದೆ. ‘ನೃತ್ಯ ಸಮಾಗಮ- 2026’ ಶೀರ್ಷಿಕೆಯಲ್ಲಿ ನಡೆಯುವ ಈ ನೃತ್ಯ ರಸರಂಜನೆಯ ಕಣ್ಮನ ತಣಿಸುವ ಕಾರ್ಯಕ್ರಮದಲ್ಲಿ ಸಾಧನ ಸಂಗಮ ಡ್ಯಾನ್ಸ್ ಸೆಂಟರಿನ ವಿದ್ಯಾರ್ಥಿಗಳಿಂದ ಚೇತೋಹಾರಿ ನೃತ್ಯವೈವಿಧ್ಯ ವೀಕ್ಷಿಸಬಹುದಾಗಿದೆ.

ನೃತ್ಯಶಾಲೆಯ ಸ್ಥಾಪಕಿ ನೃತ್ಯಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಈ ಕಾರ್ಯಕ್ರಮದಲ್ಲಿ ಪರಿಕಲ್ಪನೆ-ನೃತ್ಯಸಂಯೋಜನೆಯ ‘ವಚನ ವೈಭವ’ ಎಂಬ ನೃತ್ಯರೂಪಕವು ಡಾ. ಸಾಧನಶ್ರೀ ಪಿ. ಇವರ ಕಲಾ ನಿರ್ದೇಶನದಲ್ಲಿ ‘ನೃತ್ಯ ನಿಪುಣ’ ತಂಡದಿಂದ ಸಾದರಗೊಳ್ಳಲಿದೆ. ಜೊತೆಗೆ ಸಾಧನ ಸಂಗಮ ಡ್ಯಾನ್ಸ್ ಸೆಂಟರಿನ ವಿದ್ಯಾರ್ಥಿನಿಯರಿಂದ ಭರತನಾಟ್ಯದ ವೈವಿಧ್ಯಪೂರ್ಣ ಮನರಂಜಿಸುವ ನೃತ್ಯ ಕಾರ್ಯಕ್ರಮಗಳ ಪ್ರದರ್ಶನವಿದೆ. ಈ ನೃತ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.



***** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
