ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ನಡೆದ ಬಿತ್ತಿ ದಿನಾಚರಣೆ ಮತ್ತು ಗುಂಡ್ಮಿ ಚಂದ್ರಶೇಖರ ಐತಾಳ್ ನೆನಪಿನ ಬಹುಭಾಷಾ ಕವಿಗೋಷ್ಠಿಯು ದಿನಾಂಕ 05-07-2024ರಂದು ಎಸ್.ವಿ.ಪಿ. ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ಬಿತ್ತಿ’ ಗೋಡೆ ಬರಹ ವಾರ್ಷಿಕ ಸಂಪುಟ ಬಿಡುಗಡೆಗೊಳಿಸಿದ ಅಡ್ಯಾರಿನ ಸಹ್ಯಾದ್ರಿಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಲೇಖಕಿ ಅಕ್ಷಯ ಆರ್. ಶೆಟ್ಟಿ ಮಾತನಾಡುತ್ತಾ “ಏಕತಾನತೆ ಮತ್ತು ಒತ್ತಡವನ್ನು ನಿವಾರಿಸಲು ಬರವಣೆಗೆ ಸಹಕಾರಿಯಾಗಿದ್ದು, ಆ ಮೂಲಕ ಸಮಾಜದೊಂದಿಗೆ ಸೃಜನಶೀಲ ಸಂವಾದ ನಡೆಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ “ಕನ್ನಡದ ಹಿರಿಯ ಲೇಖಕರನ್ನು ಅಧ್ಯಯನ ಮಾಡುವ ಜೊತೆಗೆ ಸಮಕಾಲೀನ ಬರಹಗಾರರ ಕೃತಿಗಳ ಓದು, ವಿಮರ್ಶೆ ನಡೆಯಬೇಕಿದೆ” ಎಂದರು.
ವಿಭಾಗದ ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಧನಂಜಯ ಕುಂಬ್ಳೆ, ಯಶುಕುಮಾರ್, ‘ಬಿತ್ತಿ’ ಸಂಪಾದಕ ಬ್ರಿಜೇಶ್ ಯು. ಉಳ್ಳಾಲ್ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಪ್ರತೀಕ್ಷ, ಶಂಕರ್ ಓಬಳಬಂಡಿ, ಮಂಗಳ ಮಳಲಿ, ಹರ್ಷಿತಾ ಎಸ್. ಕವಿತೆಗಳನ್ನು ವಾಚಿಸಿದರು. ಸಂಧ್ಯಾ ಎನ್., ವೀಕ್ಷಿತಾ, ಹರ್ಷಿತಾ ಎಸ್. ಅತಿಥಿಗಳನ್ನು ಪರಿಚಯಿಸಿದರು. ಪ್ರತೀಕ್ಷಾ ಬಹುಮಾನಿತರ ಪಟ್ಟಿ ವಾಚಿಸಿದರು. 2024-25ರ ಅವಧಿಗೆ ಸಂಧ್ಯಾ ಎನ್. ಅವರನ್ನು ಸಂಪಾದಕಿಯಾಗಿ, ಪ್ರತೀಕ್ಷಾ ಅವರನ್ನು ಉಪಸಂಪಾದಕಿಯಾಗಿ ಆಯ್ಕೆ ಮಾಡಲಾಯಿತು.