ಮಂಗಳೂರು : ಅನೇಕಾಂತ ಫೌಂಡೇಶನ್ ಟ್ರಸ್ಟ್, ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ವತಿಯಿಂದ ದಿನಾಂಕ 08 ಆಗಸ್ಟ್ 2026ರಂದು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಆಯೋಜಿಸಿದ್ದ ಡಾ. ರಾಜಲಕ್ಷ್ಮೀ ಇವರ ಅನುವಾದಿತ ಕೃತಿ ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಬಿಡುಗಡೆ ಹಾಗೂ ‘ಅಂಡಮಾನ್ ಇತಿಹಾಸ: ದುಡಿದ ಕೈಗಳು ಮಿಡಿದ ಮನಗಳು’ ವಿಷಯ ಕುರಿತ ವಿಚಾರ ಸಂಕಿರಣ ನಡೆಯಿತು.

ಈ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಜಯ ಪೂಣಚ್ಚ ತಂಬಂಡ ಇವರು ಕೃತಿ ಬಿಡುಗಡೆ ಮಾಡಿ “ಇತಿಹಾಸ ಹೇಳದ ಅದೆಷ್ಟೋ ವಿಷಯಗಳನ್ನು ‘ಅಂಡಮಾನ್ ಇತಿಹಾಸದೊಳಗೊಂದು ಪಯಣ’ ಪುಸ್ತಕ ಮಾಹಿತಿ ನೀಡುತ್ತದೆ. ಅನುವಾದ ಕೃತಿ ಎನಿಸಿಕೊಳ್ಳದೇ ಓದಿಸಿಕೊಂಡು ಸಾಗುವುದೇ ಈ ಕೃತಿಯ ವಿಶೇಷ” ಎಂದು ಹೇಳಿದರು.


ಕರಾವಳಿ ಲೇಖಕಿಯರು- ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಜಯವಂತ ನಾಯಕ್ ಉಪಸ್ಥಿತರಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ. ಜ್ಯೋತಿ ಚೇಳ್ಯಾರು, ವಿಶ್ವವಿದ್ಯಾಲಯ ಕಾಲೇಜಿನ ಇತಿಹಾಸ ವಿಭಾಗ ಪ್ರಾಧ್ಯಾಪಕ ಪ್ರೊ. ಗಣಪತಿ ಗೌಡ ಎಸ್. ವಿಚಾರ ಮಂಡಿಸಿದರು. ಕೃತಿಯ ಲೇಖಕಿ ಡಾ. ರಾಜಲಕ್ಷ್ಮಿ ಎನ್.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನೇಕಾಂತ ಫೌಂಡೇಶನ್ ಟ್ರಸ್ಟಿನ ಡಾ. ಉದಯ ಕುಮಾರ್ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು.


