ಉಡುಪಿ : ಪ್ರತಿಷ್ಠಿತ ಉಡುಪಿ ಜಿಲ್ಲಾ ಮಟ್ಟದ ರಾಷ್ಟ್ರ – ಭಕ್ತಿ ಉದ್ಧೀಪನಾ ಅಭಿಯಾನ-2026 ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಮಕ್ಕಳ ಸಂಸ್ಕಾರ ಕೇಂದ್ರದಲ್ಲಿ ದಿನಾಂಕ 11 ಆಗಸ್ಟ್ 2026ರಂದು ಉದ್ಘಾಟನೆಗೊಂಡಿತು. ಜಿಲ್ಲೆಯ ಬಹುತೇಕ ಸಕಲ ಶಾಲಾಮಕ್ಕಳಿಂದ ಕಿಕ್ಕಿರಿದ ಸಭಾಂಗಣದಲ್ಲಿ ವಿವಿಧ ರಾಗಗಳಲ್ಲಿ ಹೊಮ್ಮಿದ ದೇಶಭಕ್ತಿ ಗೀತೆಗಳು, ಭಾಷಣ ಸ್ಫರ್ಧೆ, ಪ್ರಬಂಧ ಲೇಖನ, ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಏಕಪಾತ್ರ ಅಭಿನಯ ಸ್ಫರ್ಧೆಗಳ ಉದ್ಘಾಟಿಸಿದವರು ಯುವ-ಯೋಗತಜ್ನ್ಯ ವಿದ್ವಾನ್ ನಾಗಶಯನ ಪದಕಣ್ಣಾಯರು.

“ಹಿಂದೆಂದಿಗಿಂತಲೂ ಇಂದಿನ ಕಾಲಘಟ್ಟದಲ್ಲಿ ಭಾರತೀಯರಾಗಿ ನಾವೆಲ್ಲಾ ಭಾರತೀಯತೆಯ ಅಸ್ಮಿತೆಗಳಾದ ವೇದ-ಗೀತೆ-ಶ್ರೀಮದ್ಭಾಗವತ, ರಾಮಾಯಣ-ಮಹಾಭಾರತ, ಯೋಗವೇ ಮುಂತಾದ ಸುಜ್ನಾನಗಳ ಅಧ್ಯಯನಗಳಲ್ಲಿ ನಮ್ಮ ಶಾಲಾ ಮಕ್ಕಳನ್ನು ತೊಡಗಿಸಿದ್ದೇ ಆದರೆ ಅವರಲ್ಲಿ ದೇಶಭಕ್ತಿ ಉದ್ಧೀಪನವಾದೀತು ಎಂದು ಅಭಿಪ್ರಾಯಪಟ್ಟ ನಾಗಶಯನರು ಅದೇ ವೇಳೆ ಇಂದಿನ ಮಕ್ಕಳಿಗೆ ನಮ್ಮ ಭಾರತದ ಸತ್ಯವಾದ ಇತಿಹಾಸದ ಪರಿಚಯ ಮಾಡಿಕೊಡುವುದು ಸದ್ಯದ ಅತ್ಯಗತ್ಯ ಜವಾಬ್ದಾರಿಯಾಗಿದೆ” ಎಂದರು.

ತೀರ್ಪುಗಾರರಲ್ಲೊಬ್ಬರಾದ ನಿವೃತ್ತ ಪ್ರಾಧ್ಯಾಪಕ – ವೇದ ವಿ. ರಾಮಕೃಷ್ಣ ಶಾಸ್ತ್ರಿಗಳು ತಮ್ಮ ಬಾಲ್ಯವನ್ನು ನೆನಪಿಸಿಕೊಂಡು, ಈಗ್ಗೆ ಕೆಲವಾರು ವರ್ಷಗಳಿಂದ ಶ್ರೀ ಅಭಿರಾಮ ಧಾಮ ಶಾಲಾ ಮಕ್ಕಳಲ್ಲಿ ದೇಶಭಕ್ತಿ ಎಂಬ ಸುಜ್ನ್ಯಾನದ ದೀಪ್ತಿಯನ್ನು ಉದ್ಧೀಪನಗೊಳಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ! ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ಇಂಥಾ ರಾಷ್ಟ್ರ ನವನಿರ್ಮಾಣ ಕಾರ್ಯಕ್ಕೆ ಧುಮುಕಿರುವ ಇವರಿಬ್ಬರಿಗೆ ಉಡುಪೀ ಶ್ರೀಕೃಷ್ಣನ ಅನುಗ್ರಹ ಲಭ್ಯವಾಗಲೆಂದು ಪ್ರಾರ್ಥಿಸಿದರು. ವೇದಿಕೆಯಲ್ಲಿ ಫಲಿಮಾರು ಮಠದ ವೇದ ವಿದ್ವಾನ್ ಮುದರಂಗಡಿ ಶ್ರೀಶಭಟ್ಟ ಆಚಾರ್ಯರೂ ಉಪಸ್ಥಿತರಿದ್ದರು.
ಆಯೋಜಕ, ಸ್ವರಸಾಮ್ರಾಟ್ ವಿದ್ವಾನ್ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಸುದರ್ಶನ ಭಾರತೀಯ ಮಾತನಾಡಿ ಜಿಲ್ಲೆಯ ಸರಿಸುಮಾರು 27 ಶಾಲೆಗಳಿಂದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಮೂರು ದಿನಗಳ ಈ ವಿಶಿಷ್ಟ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದೇ ಬಹಳ ಹೆಮ್ಮೆಯ ಸಂಗತಿ! ನಮ್ಮ ಶಾಲಾಮಕ್ಕಳಲ್ಲಿ ರಾಷ್ಟ್ರೀಯತೆಯ ನವಭಾವಗಳ ಬೀಜಾಂಕುರವಾಗಿ, ʼಝೆನ್ ಆಲ್ಫಾʼ ಎಂಬ ಇವರಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಸತತ ದೇಶಾಭಿಮಾನದ ಹವಾ-ಪ್ರಭಾವ ಬೀರಿದ್ದೇ ಆದರೆ, ʼಝೆನ್ ಜೀʼ ಎಂಬ ಇಂದಿನ ದೇಶದ್ರೋಹೀ ಜಿರಲೆಗಳಿಗಿಂತ ಉನ್ನತ ಸ್ಥರದ ಸತ್ಪ್ರಜೆಗಳಾಗುವುದರಲ್ಲಿ ಸಂದೇಹವಿಲ್ಲ ಎಂಬ ಆಶಾವಾದ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನಾಟ್ಯ ವಿದುಷಿ ಸುಷ್ಮಾ ಸುದರ್ಶನ್ ಈ ಸಮಾರಂಭಗಳ ನಿರೂಪಕರಾಗಿದ್ದರು.


