ಮುಂಬಯಿ : ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ದಿನಾಂಕ : 21-07-2023ರಂದು ಶುಕ್ರವಾರ ನಾಲ್ಕು ಕೃತಿಗಳ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಡಾ.ಎಸ್.ಎಲ್ ಭೈರಪ್ಪನವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಪದ್ಮಭೂಷಣ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಈ ವಿಷಯದ ಕುರಿತು ಪುಣೆಯ ಖ್ಯಾತ ಸಾಹಿತಿ, ವಿಮರ್ಶಕರಾಗಿರುವ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ವಿಶೇಷ ಉಪನ್ಯಾಸವನ್ನು ನೀಡುವರು.
ಡಾ.ಎಸ್.ಎಲ್ ಭೈರಪ್ಪ
ಡಾ.ಉಮಾ ರಾಮರಾವ್
ಡಾ.ಜಿ.ಎನ್. ಉಪಾಧ್ಯ
ಕಲಾ ಭಾಗ್ವತ್
ಡಾ.ಸುಪ್ರಿಯಾ ಸಹಸ್ರಬುದ್ಧೆ – ವಿಶೇಷ ಉಪನ್ಯಾಸ
ಇದೇ ಸಂದರ್ಭದಲ್ಲಿ ನಾಲ್ಕು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಡಾ.ಉಮಾ ರಾಮರಾವ್ ಅವರು ಸಂಪಾದಿಸಿರುವ ‘ಭಾಷೆಗಳ ಗಡಿಗೆದ್ದ ಭಾರತೀಯ’, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರ ‘ಮುಂಬಯಿ ಕನ್ನಡ ಪರಿಸರ’, ಡಾ.ಉಮಾ ರಾಮರಾವ್ ಅವರ ‘ಸಂಶೋಧನೆಯಲ್ಲಿ ಶಿಸ್ತು ಮತ್ತು ನೈತಿಕ ಪ್ರಜ್ಞೆ’ ಮತ್ತು ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ‘ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ’ ಕೃತಿಗಳನ್ನು ಡಾ.ಎಸ್.ಎಲ್.ಭೈರಪ್ಪ , ಡಾ.ಜಿ.ಎನ್.ಉಪಾಧ್ಯ ಹಾಗೂ ಕಲಾವಿದರಾದ ಮೋಹನ ಮಾರ್ನಾಡ್ ಅವರು ಬಿಡುಗಡೆಗೊಳಿಸಲಿರುವರು. ಎಂ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ, ಸವಿತಾ ಅರುಣ್ ಶೆಟ್ಟಿ, ಉಮಾ ರಾಮ ರಾವ್ ಹಾಗೂ ಮೊಗವೀರ ಮಾಸಿಕದ ಅಶೋಕ ಸುವರ್ಣ ಅವರು ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್ ಹಾಗೂ ಕಂಠದಾನ ಕಲಾವಿದರಾಗಿರುವ ಸುರೇಂದ್ರ ಕುಮಾರ್ ಮಾರ್ನಾಡ್ ಅವರಿಂದ ಭೈರಪ್ಪನವರ ಕೃತಿಗಳ ಆಯ್ದ ಭಾಗದ ವಾಚನವೂ ನಡೆಯಲಿದೆ. ಸಂಶೋಧನ ವಿದ್ಯಾರ್ಥಿಗಳು ಭೈರಪ್ಪನವರೊಂದಿಗೆ ಸಂವಾದ ನಡೆಸಲಿದ್ದಾರೆ. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿರುವರು ಎಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಪ್ರಕಟಿಸಿದೆ.