ಮಂಗಳೂರು : ವಿಕಾಸ್ ಆರ್. ಮೌರ್ಯ ಇವರು ಕನ್ನಡಕ್ಕೆ ಅನುವಾದಿಸಿರುವ, ತೆಲುಗು ಸಾಹಿತಿ ಎಂಡ್ಲೂರಿ ಸುಧಾಕರ್ ಇವರ ‘ನುಡಿ ಚಮ್ಮಾಳಿಗೆ’ ಕೃತಿಯನ್ನು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹೋದಯ ಆವರಣದಲ್ಲಿ ಜೀರುಂಡೆ ಪ್ರಕಾಶನ ಮತ್ತು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ದಿನಾಂಕ 28 ಜೂನ್ 2026ರಂದು ಜರಗಿದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಇವರು ಬಿಡುಗಡೆಗೊಳಿಸಿ ಮಾತನಾಡಿ “ಡಾ. ವಾಸುದೇವ ಬೆಳ್ಳೆಯವರು, ಈ ಕೃತಿಯನ್ನು ಗ್ರಾಮ್ಯ ಭಾಷೆಯಲ್ಲಿ ಅನುವಾದಿಸಲಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾದ ಮಾದಿಗ ಸಮುದಾಯದ ದಮನಿತ ನುಡಿಗಳು, ಮಾದಿಗ ಸಾಂಸ್ಕೃತಿಕ ಲೋಕದ ಚರಿತ್ರೆ ಈ ಕೃತಿಯಲ್ಲಿ ಇದೆ” ಎಂದು ಹೇಳಿದರು.
ಸಾಹಿತಿ ಅತ್ರಾಡಿ ಅಮೃತ ಶೆಟ್ಟಿಯವರು ಕೃತಿಯ ಬಗ್ಗೆ ಮಾತನಾಡಿದರು. ಸಂತ ಅಲೋಶಿಯಸ್ ಪರಿಗಣಿತ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಕೃತಿಯ ಅನುವಾದಕ ವಿಕಾಸ್ ಆರ್. ಮೌರ್ಯ, ಜೀರುಂಡೆ ಪುಸ್ತಕ ಪ್ರಕಾಶನದ ಧನಂಜಯ ಎನ್. ಉಪಸ್ಥಿತರಿದ್ದರು. ಎಚ್.ಎಂ. ಪೆರ್ನಾಲ್ ಸ್ವಾಗತಿಸಿ, ಫಾತಿಮಾ ರಲಿಯಾ ನಿರೂಪಿಸಿದರು.
