ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ ಪಾರ್ತಿಸುಬ್ಬ ವಿರಚಿತ ‘ಉಂಗುರ ಸಂಧಿ’ ಎಂಬ ಆಖ್ಯಾನದೊಂದಿಗೆ ದಿನಾಂಕ 30 ಜೂನ್ 2026 ಮಂಗಳವಾರ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಆನಂದ ಸವಣೂರು ಹಾಗೂ ಚೆಂಡೆ ಮದ್ದಲೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ಸಮರ್ಥ ವಿಷ್ಣು ಕಡಂಬಳಿಕೆ,ಅನೀಶ ಕೃಷ್ಣ ಪುಣಚ, ಕುಮಾರಿ ಶರಣ್ಯ ನೆತ್ತರಕೆರೆ ಭಾಗವಹಿಸಿದರು. ಹನುಮಂತನ ಪಾತ್ರದಲ್ಲಿ ಮಾಂಬಾಡಿ ವೇಣುಗೋಪಾಲ ಭಟ್, ಭಾಸ್ಕರ ಬಾರ್ಯ ಹಾಗೂ ಗುಡ್ಡಪ್ಪ ಬಲ್ಯ, ಸೀತೆಯಾಗಿ ಶ್ರೀಮತಿ ಮನೋರಮಾ ಜಿ. ಭಟ್, ಜಾಂಬವನಾಗಿ ಶ್ರೀಮತಿ ಶುಭಾ ಅಡಿಗ, ರಾವಣನಾಗಿ ತಾರನಾಥ ಸವಣೂರು, ಲಂಕಿಣಿಯಾಗಿ ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ, ಸರಮೆಯಾಗಿ ಶ್ರೀಮತಿ ಪ್ರೇಮಲತಾ ರಾವ್, ತೃಣಬಿಂದುವಿನ ಪಾತ್ರದಲ್ಲಿ ಬಡೆಕ್ಕಿಲ ಚಂದ್ರಶೇಖರ ಭಟ್ ಭಾಗವಹಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪುಳು ಈಶ್ವರ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ಪ್ರಬಂಧಕ ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜೂನ್ 29ರಂದು ಇಹಲೋಕ ತ್ಯಜಿಸಿದ ಪ್ರಸಂಗಕರ್ತ, ಹಿರಿಯ ಕಲಾವಿದ ಮಧೂರು ವೆಂಕಟಕೃಷ್ಣ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.

